ಯಾದಗಿರಿ | ಏ.15ರವರೆಗೆ ಎಡದಂಡೆ ಕಾಲುವೆಗಳಿಗೆ ನೀರು ಹರಿಸಲು ರೈತ ಸಂಘದಿಂದ ಮನವಿ
ಸುರಪುರ : ಕೃಷ್ಣಾ ಎಡದಂಡೆ ಕಾಲುವೆ ಗಳಿಗೆ ಏ.15ರ ವರೆಗೆ ನೀರು ಹರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಾಮೂಹಿಕ ನಾಯಕತ್ವ ಸಂಘಟನೆಯ ತಾಲೂಕು ಘಟಕದಿಂದ ನಗರದ ಹಸನಾಪುರ ಯುಕೆಪಿ ಕ್ಯಾಂಪ್‌ಲ್ಲಿನ ಉಪ ವಿಭಾಗ ಸಂಖ್ಯೆ 10ರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಹಣಮಂತ್ರಾಯ ಮಡಿವಾಳ ಮಾತನಾಡಿ, ರಾತ್ರೋ ರಾತ್ರಿ ಆಂಧ್ರಪ್ರದೇಶಕ್ಕೆ ನೀರು ಬಿಡಲಾಗುತ್ತದೆ, ಆದರೆ ಇಲ್ಲಿಯ ಕೊನೆ ಭಾಗದ ರೈತರಿಗೆ ನೀರು ಬರದೆ ಬೆಳೆಗಳು ಒಣಗಲಾರಾಂಭಿಸಿವೆ, ಆದರೆ ಮಾ.23ರ ವರೆಗೆ ನೀರು ಬಿಡುವುದಾಗಿ ಸರಕಾರ ಹೇಳಿದೆ, ರೈತರ ಬೆಳೆಗಳಿಗೆ ಕನಿಷ್ಠ ಏ.15ರ ವರೆಗೆ ನೀರು ಬಂದರೆ ಮಾತ್ರ ಬೆಳೆ ಬರುತ್ತದೆ, ಇಲ್ಲವಾದಲ್ಲಿ ರೈತರ ಬೆಳೆಗಳು ಹಾಳಾಗಲಿವೆ. ಆದ್ದರಿಂದ ಸರಕಾರ ಏ.15ರ ವರೆಗೆ ನೀರು ಬಿಡುವುದಾಗಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸುತ್ತೇವೆ.
ನಮ್ಮ ಮನವಿಗೆ ಸ್ಪಂಧಿಸದಿದ್ದಲ್ಲಿ ಸಂಘಟನೆ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ನಂತರ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಿಗೆ ಬರೆದ ಮನವಿ ಕಚೇರಿ ಸಿಬ್ಬಂದಿ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸಾಹೇಬಗೌಡ ಮದಲಿಂಗನಾಳ, ವೆಂಕಟೇಶಗೌಡ ಕುಪಗಲ್,ಮಲ್ಲಣ್ಣ ಹಾಲಬಾವಿ, ವೆಂಕೋಬದೊರೆ ಕುಪಗಲ್,ನಾಗಪ್ಪ ಕುಪಗಲ್, ಹಣಮಂತ ಕುಂಬಾರಪೇಟ, ಮಲ್ಲಣ್ಣ ಅಂಗಡಿ ಕೊಡೇಕಲ್, ರಾಮು ಕರ್ನಾಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.