ಯಾದಗಿರಿ | ದಲಿತ ಮಕ್ಕಳ ಊಟದ ತಟ್ಟೆ ತೊಳೆಯಲು ಅಡುಗೆ ಸಿಬ್ಬಂದಿ ನಿರಾಕರಣೆ ಆರೋಪ; ಮಧ್ಯಾಹ್ನದ ಬಿಸಿಯೂಟ ಬಂದ್!
ಯಾದಗಿರಿ : ಸರಕಾರಿ ಶಾಲೆಯ ದಲಿತ ಮಕ್ಕಳು ಬಿಸಿಯೂಟ ಮಾಡಿದ್ದ ತಟ್ಟೆ ತೊಳೆಯಲು ಅಡುಗೆ ಸಹಾಯಕ ಸಿಬ್ಬಂದಿ ನಿರಾಕರಿಸಿದ ಕಾರಣ ಮಧ್ಯಾಹ್ನದ ಬಿಸಿಯೂಟ ಸ್ಥಗಿತಗೊಂಡಿದೆ ಎನ್ನಲಾದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಸಮೀಪದ ಕರಕಳ್ಳಿ ಗ್ರಾಮದಲ್ಲಿ ನಡೆದಿದೆ.
ಕರಕಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಾನಿಯೊಬ್ಬರು 200 ಸ್ಟೀಲ್ ತಟ್ಟೆ ನೀಡಿದ್ದಾರೆ. ಆದರೆ ದಲಿತ ಮಕ್ಕಳು ಊಟ ಮಾಡಿದ್ದ ತಟ್ಟೆ ತೊಳೆಯಲು ಅಡುಗೆ ಸಹಾಯಕಿಯರು ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಜೊತೆಗೆ ಕೆಲ ಸಿಬ್ಬಂದಿ ದಿಢೀರ್ ಕೆಲಸಕ್ಕೆ ರಜೆ ಹಾಕಿ ತೆರಳಿದ್ದಾರೆ. ಹೀಗಾಗಿ ನಾಲ್ಕೈದು ದಿನಗಳಿಂದ ಮಕ್ಕಳಿಗೆ ಬಿಸಿಯೂಟವೇ ಸ್ಥಗಿತಗೊಂಡಿದೆ. ಮಕ್ಕಳು ಹಸಿದ ಹೊಟ್ಟೆಯಲ್ಲಿ ಹೋಗಬಾರದೆಂದು ದಿನಗೂಲಿ ಆಧಾರದ ಮೇಲೆ ಬೇರೆ ಅಡುಗೆ ಸಿಬ್ಬಂದಿಯನ್ನು ಕರೆಸಿ ಮಕ್ಕಳಿಗೆ ಉಪ್ಪಿಟ್ಟು, ರಾಗಿ ಗಂಜಿ ನೀಡಲಾಗುತ್ತಿದೆ ಎಂದು ಗ್ರಾಮದ ಗುರುಲಿಂಗಪ್ಪ ದೊಡ್ಡಮನಿ ಎಂಬವರು ತಿಳಿಸಿದ್ದಾರೆ.
ಈ ಬಗ್ಗೆ ದಲಿತ ಮುಖಂಡರು ಶಿಕ್ಷಣ ಇಲಾಖೆ, ಪಿಡಿಒ, ಪೊಲೀಸ್ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅಲ್ಲದೇ ಅಡುಗೆ ಸಿಬ್ಬಂದಿಯನ್ನು ವಜಾ ಮಾಡುವಂತೆ ಮನವಿ ಮಾಡಿದ್ದಾರೆ. ಆದರೆ, ಅಧಿಕಾರಿಗಳು ಮನವಿಗೆ ಸ್ಪಂದಿಸಿಲ್ಲ. ಅಲ್ಲದೇ ಘಟನೆ ನಡೆದು ಮೂರು ದಿನವಾದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.