×
Ad

ಯಾದಗಿರಿ | ಜಾತಿ ನಿಂದನೆಗೈದು ಹಲ್ಲೆ ಪ್ರಕರಣ : ಆರೋಪಿಗಳನ್ನು ಬಂಧಿಸುವಂತೆ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಆಗ್ರಹ

Update: 2025-05-23 21:49 IST

ಯಾದಗಿರಿ: ಗುರುಮಠಕಲ್ ತಾಲೂಕಿನ ಗೋಪಾಳಪುರ ಗ್ರಾಮದ ಕಾಶಪ್ಪ ಎಂಬವರಿಗೆ ಸೇರಿದ ಜಮೀನನ್ನು ಅತಿಕ್ರಮಣ ಮಾಡಿಕೊಳ್ಳಲು ಯತ್ನಿಸಿ, ಹಲ್ಲೆ ಮಾಡಿ, ಜಾತಿ ನಿಂದನೆಗೈದ 10 ಆರೋಪಿಗಳ ಮೇಲೆ ದೂರು ದಾಖಲಾದರೂ ಅವರನ್ನು ಬಂಧಿಸದ ಗುರುಮಠಕಲ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಅನ್ನು ಸೇವೆಯಿಂದ ಅಮಾನತುಗೊಳಿಸಬೇಕು ಮತ್ತು ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಬೇಕೆಂದು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ರಾಜ್ಯ ಕಾರ್ಯದರ್ಶಿ ಕಾಶಿನಾಥ ನಾಟೇಕಾರ ಆಗ್ರಹಿಸಿದ್ದಾರೆ.

ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಶಿನಾಥ ನಾಟೇಕಾರ, ಸರ್ವೆ ನಂ.3, 4, 5 ಮತ್ತು 6ರ ಜಮೀನಿಗೆ ಕಾಶಪ್ಪ ಎಂಬವರು ಪಟ್ಟೆದಾರರಾಗಿದ್ದು,1982-83ರಲ್ಲಿ ಈ ಜಮೀನು ಮಂಜೂರು ಆಗಿದೆ. ಆದರೇ ಈಗ ಗ್ರಾಮದ ಶರಣಪ್ಪ, ಸಾಬಣ್ಣಾ ಮತ್ತು ಇತರ ಐವರು ದಬ್ಬಾಳಿಕೆ ಮಾಡುವ ಮೂಲಕ ಜಮೀನನ್ನು ವಶಪಡಿಸಿಕೊಳ್ಳಲು‌ ಮುಂದಾಗಿ ಕಾಶಪ್ಪ ಮತ್ತು ಅವರ ಪುತ್ರ ರಾಮು ಮೇಲೆ ಹಲ್ಲೆ ಮಾಡಿ, ಜಾತಿ ನಿಂದನೆಗೈದಿದ್ದಾರೆ. ಈ ಕುರಿತು ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ 10 ಮಂದಿ ಆರೋಪಿಗಳ ವಿರುದ್ಧ ದೂರು ದಾಖಲಾದರೂ, ಈವರೆಗೆ ಅವರನ್ನು ಬಂಧಿಸದೆ ದೂರು ನೀಡಿದವರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು. 

ತಕ್ಷಣ 10 ಮಂದಿ ಆರೋಪಿಗಳನ್ನು ಬಂಧಿಸಬೇಕು. ಈ ಪ್ರಕರಣದಲ್ಲಿ ದೂರುದಾರರಿಗೆ ತೊಂದರೆ ನೀಡಿ ಆರೋಪಿಗಳ‌ ಪರವಾಗಿ ವಕಾಲತ್ತು ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.    

ಸುದ್ದಿಗೋಷ್ಠಿಯಲ್ಲಿ ಕಾಶಪ್ಪ, ಬಸವರಾಜ ಭಜಂತ್ರಿ, ಸಾಯಬಣ್ಣಾ ಯಡ್ಡಳ್ಳಿ, ಭೀಮಣ್ಣಾ , ಹಣಮಂತ ನಾಯಕ್, ರಂಗಪ್ಪ, ಮೌನೇಶ, ಮಲ್ಲಿಕಾರ್ಜನ ಕುಮನೂರ ಉಪಸ್ಥಿತರಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News