ಯಾದಗಿರಿ | ಮೆಕ್ಯಾನಿಕ್ ಸಂಘಕ್ಕೆ ಮೂಲಭೂತ ಸೌಲಭ್ಯಕ್ಕೆ ಆಗ್ರಹಿಸಿ ಬೈಕ್ ರ್‍ಯಾಲಿ ಮೂಲಕ ಜಿಲ್ಲಾಧಿಕಾರಿಗೆ ಮನವಿ
ಯಾದಗಿರಿ : ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಮುದ್ನಾಳ್ ನೇತೃತ್ವದಲ್ಲಿ ಮೆಕ್ಯಾನಿಕ್, ಮಾಲಕರು ಯಾದಗಿರಿ ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಬೈಕ್ ರ್‍ಯಾಲಿ ನಡೆಸಿದರು.
ಈ ವೇಳೆ ಮಾತನಾಡಿದ ಉಮೇಶ್ ಮುದ್ನಾಳ್ ಅವರು, ಯಾದಗಿರಿ ಜಿಲ್ಲಾ ಕೇಂದ್ರವಾಗಿ ಸುಮಾರು 15 ವರ್ಷ ಗತಿಸಿದರೂ, ಕೂಡಾ ಗ್ಯಾರೇಜ್ ಮಾಲಕರಿಗೆ / ಮೆಕ್ಯಾನಿಕ್‌ರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳು ಸಿಗದೇ ಇರಲು ಸರ್ಕಾರ ಮತ್ತು ಅಧಿಕಾರಿಗಳೇ ಹೊಣೆಯಾಗಿದ್ದಾರೆ ಎಂದರು.
ಮಾಲಕರ ಮತ್ತು ಮೆಕ್ಯಾನಿಕರ ಪ್ರಮುಖ ಬೇಡಿಕೆಯಾಗಿರುವ ಆಟೋ ನಗರ ಮಾಡುವುದರ ಜೊತೆಗೆ ಅವರ ವಿವಿಧ ಬೇಡಿಕೆಗಳಾದ ಮೆಕ್ಯಾನಿಕ್ ಮತ್ತು ಮಾಲಕರಿಗೆ ರಿಯಾಯಿತಿ ದರದಲ್ಲಿ ಸಾಲ-ಸೌಲಭ್ಯ ಮತ್ತು ಮೆಕ್ಯಾನಿಕರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು, ಮೆಕ್ಯಾನಿಕ್‌ಗಳಿಗೆ ಕಾರ್ಮಿಕ ಇಲಾಖೆಯಿಂದ ಉಚಿತವಾಗಿ ಕಾರ್ಮಿಕ ಕಾರ್ಡ್‌ಗಳು ವಿತರಣೆ ಮತ್ತು ಮೆಕ್ಯಾನಿಕರಿಗೆ ಉಚಿತ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ತಿಳಿಸಿದರು.
ಈ ಎಲ್ಲಾ ಬೇಡಿಕೆಗಳನ್ನು ಒಂದು ವಾರದೊಳಗೆ ಸಂಬಂಧಪಟ್ಟ ಅಧಿಕಾರಿಗಳು ನಮ್ಮ ಸಂಘಟನೆ ಸಮ್ಮುಖದಲ್ಲಿ ಸಭೆ ಕರೆದು, ಸುಧೀರ್ಘವಾಗಿ ಚರ್ಚೆ ಮಾಡಿ, ನಮ್ಮ ಬೇಡಿಕೆ ಈಡೇರಿಸಲು ಜಿಲ್ಲಾಡಳಿತ ಮುಂದಾಗಬೇಕು. ಇಲ್ಲದಿದ್ದರೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೊಟ್ಟೆಪ್ಪಗೋಳ ಅವರು, ಹತ್ತು ದಿನಗಳ ಒಳಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ಕರೆದು, ಈ ವಿಚಾರದ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು
ಈ ಸಂದರ್ಭದಲ್ಲಿ ಶರಣಪ್ಪ, ಮುಹಮ್ಮದ್ ಗೌಸ್, ಹಣಮಂತ, ಮುಹಮ್ಮದ್ ಶಫಿ, ಬನಪ್ಪಗೌಡ, ಮುಹಮ್ಮದ್ ಕರೀಮ್, ಸೈಯದ್, ಮುಹಮ್ಮದ್ ನಿಸಾರ್, ವೀರಣ್ಣ, ಜಲಾಲ್ ಸಾಭ್, ಚಾಂದಪಾಷಾ, ಪ್ರಭು, ಎಂಡಿ ಕುಮಾರ್, ಮುಹಮ್ಮದ್ ಜಲಾಲುದ್ದೀನ್, ಬಾಬರ, ರಸೂಲ್, ಗಾಲೀಬ್ ರಮೇಶ್, ಶಫಿ ನಾಗು, ಓಲಿ, ಮಲ್ಲೇಶ, ಬಾಬಾ ಖಾನ್ ಸೇರಿ ಹಲವರಿದ್ದರು.