ಯಾದಗಿರಿ | 'ಬಿ' ಖಾತಾ ಆಂದೋಲನಕ್ಕೆ ನಗರದಲ್ಲಿ ಅಭಿಯಾನ : ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಮಾಹಿತಿ
ಯಾದಗಿರಿ: ನಗರಸಭೆ ವ್ಯಾಪ್ತಿಯ ಅನಧಿಕೃತ ಆಸ್ತಿಗಳನ್ನು ಬಿ- ಖಾತಾ ರಿಜಿಸ್ಟರ್‌ನಲ್ಲಿ ದಾಖಲಿಸಲು ನಗರದಾದ್ಯಂತ ಹಮ್ಮಿಕೊಂಡಿರುವ ಬಿ-ಖಾತಾ ಆಂದೋಲನಕ್ಕೆ ಎಲ್ಲಾ ವಾರ್ಡ್ ಗಳಲ್ಲಿ ಒಂದು ದಿನ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಇದರ ಯಶಸ್ವಿಗಾಗಿ ಎಲ್ಲಾ ಸದಸ್ಯರು ಶ್ರಮಿಸಬೇಕು ಎಂದು ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ಹೇಳಿದರು.
ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಸರ್ವ ಸದಸ್ಯರಿಗೆ ಬಿ ಮತ್ತು ಎ ಖಾತಾ ಬಗ್ಗೆ ಮಾಹಿತಿ ನೀಡುವ ಬಗ್ಗೆ ನಡೆದ ಸಭೆಯ ಅಧ್ಯಕ್ಷೆ ವಹಿಸಿ ಮಾತನಾಡಿದರು.
ಆಂದೋಲನದಲ್ಲಿ ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿಗಳನ್ನು ಬಿ-ಖಾತಾ ರಿಜಿಸ್ಟರ್‌ನಲ್ಲಿ ದಾಖಲಿಸಲು ಮಾಲಕರಿಗೆ ನಿಗಧಿತ ಅರ್ಜಿಯನ್ನು ವಿತರಿಸಲಾಗುವುದು. ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸ್ವೀಕರಿಸಲು ವಾರ್ಡ್ ವಾರು ಸ್ಥಳಗಳನ್ನು ನಿಗಧಿಪಡಿಸಲಾಗುತ್ತದೆ. ನಿಗದಿ ಸ್ಥಳದಲ್ಲಿ ಸಾರ್ವಜನಿಕರು ಸೀಮಿತ ಕಾಲಾವಧಿಯೊಳಗೆ ಅರ್ಜಿ ಸಲ್ಲಿಸಿ ತಮ್ಮ ಆಸ್ತಿಯನ್ನು ಬಿ-ಖಾತಾ ರಿಜಿಸ್ಟರ್‌ನಲ್ಲಿ ದಾಖಲಿಸಬಹುದಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಗರಸಭೆ ವ್ಯಾಪ್ತಿಯ 31 ವಾರ್ಡ್ ಗಳಲ್ಲಿ ಬಿ- ಖಾತಾ ರಿಜಿಸ್ಟರ್ ದಾಖಲಾತಿ ಆಂದೋಲನ ನಡೆಯಲಿದ್ದು, ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು. ಆ ವಾರ್ಡಿನ ಸದಸ್ಯರು ಇದಕ್ಕೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ ಮಾತನಾಡಿ, ಸಾರ್ವಜನಿಕರು ತಮ್ಮ ಆಸ್ತಿಗೆ ಸಂಬಂಧಿಸಿದಂತೆ ಬಿ ಅಥವಾ ಎ ಖಾತಾ ಪಡೆಯಲು ಮಧ್ಯವರ್ತಿಗಳನ್ನು ಸಂಪರ್ಕಿಸದೆ ನೇರವಾಗಿ ಸಂಬಂಧಪಟ್ಟ ಅಧಿಕಾರಿಗಳನ್ನ ಭೇಟಿ ಮಾಡಬೇಕು. ಇದಕ್ಕೆ ಸರ್ವ ಸದಸ್ಯರ ಸಹಕಾರ ಬಹಳ ಮುಖ್ಯವಾಗಿದೆ ಎಂದು ಸೂಚನೆ ನೀಡಿದರು.
ನಗರಸಭೆ ಉಪಾಧ್ಯಕ್ಷೆ ರುಕಿಯಾ ಬೇಗಂ ಸೇರಿದಂತೆ ಸದಸ್ಯರು ಇದ್ದರು.