ಯಾದಗಿರಿ | ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಾಖಲೆ ಬಜೆಟ್ ಮಂಡಿಸಿದ್ದಾರೆ : ರಾಮಣ್ಣ
ಸುರಪುರ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ತಮವಾದ 16ನೇ ಬಜೆಟ್ ಮಂಡಿಸಿದ್ದು, ಇದೊಂದು ದಾಖಲೆಯ ಬಜೆಟ್ ಆಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ರಾಮಣ್ಣ ಕಲ್ಲದೇವನಹಳ್ಳಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಿಕ್ಷಣ, ವಸತಿ ಶಾಲೆಗಳಿಗೆ ಒತ್ತು ನೀಡಿದ್ದಾರೆ, ಚಿತ್ತಾಪುರ ತಾಲೂಕಿನ ಸನ್ನತಿ ಬೌದ್ಧ ಇತಿಹಾಸವಿರುವ ಈ ಸ್ಥಳದ ಮಹತ್ವ ಎತ್ತಿ ಹಿಡಿದು ಸನ್ನತಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿದ್ದು ಸಂತಸದ ವಿಷಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸನ್ನತಿ ಪಂಚಶೀಲ ಪಾದಯಾತ್ರೆಗೆ ಸರಕಾರ ಗೌರವಿಸಿ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಸನ್ನತಿ ಅಭಿವೃಧ್ಧಿ ಪ್ರಾಧಿಕಾರ ರಚನೆ ಕುರಿತು ಘೋಷಿಸಿರುವುದು ಸಂತಸದ ಸಂಗತಿಯಾಗಿದೆ ಎಂದು ಸುರಪುರ ಗೋಲ್ಡನ್ ಕೇವ್ ಬುದ್ಧ ವಿಹಾರ ಟ್ರಸ್ಟ್ ಅಧ್ಯಕ್ಷ ವೆಂಕಟೇಶ ಹೊಸಮನಿ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಸನ್ನತಿ ಪಂಚಶೀಲ ಪಾದಯಾತ್ರೆಯ ರುವಾರಿಗಳಾದ ಪೂಜ್ಯ ಬಂತೇ ಬೋಧಿ ದತ್ತ ಮಹಾ ಥೇರೋ ಅವರುಗಳ ಹಾಗೂ ಬಿಕ್ಕು ಸಂಘದ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿದ್ದರ ಫಲವಾಗಿ ಪ್ರಾಧಿಕಾರ ರಚನೆಯಾಗಿದೆ ಹಾಗೂ ಇನ್ನುಳಿದ ಬೇಡಿಕೆಗಳನ್ನು ಪೂರೈಸುವ ಭರವಸೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ಸಚಿವರಾದ ಪ್ರಿಯಾಂಕ್ ಖರ್ಗೆಯವರು ಮೂಡಿಸಿದ್ದಾರೆ. ಮುಖ್ಯಮಂತ್ರಿ ಮತ್ತು ಸಚಿವ ಪ್ರಿಯಾಂಕ್ ಖರ್ಗೆಯವರಿಗೂ ಹಾಗೂ ಸಹಕರಿಸಿದ ಸರ್ವ ಉಪಾಸಕ, ಉಪಾಸಿಕರಿಗೂ ಬುಧ್ಧ ವಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.