×
Ad

ಯಾದಗಿರಿ | ಮದ್ಯಪಾನ, ಮಾದಕ ವಸ್ತು ಸೇವನೆ ದೇಹಕ್ಕೆ ಹಾನಿಕಾರಕ : ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ.

Update: 2025-06-26 17:22 IST

ಯಾದಗಿರಿ: ಮಾದಕ ವಸ್ತುಗಳು ಹಾಗೂ ಮದ್ಯಪಾನ ಸೇವನೆಯಿಂದ ವೈಯಕ್ತಿಕವಾಗಿ ಆರೋಗ್ಯಕ್ಕೆ ಹಾನಿಯಾಗುವ ಜೊತೆಗೆ ದೇಶದ ಹಿತದೃಷ್ಟಿಯಿಂದಲೂ ಇದು ಹಾನಿಕಾರಕವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ಹೇಳಿದರು.

ನಗರದ ಲುಂಬಿನಿ ಉದ್ಯಾನವನದಲ್ಲಿ ಇಂದು ಜಿಲ್ಲಾ ಪೋಲಿಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ದುರುಪಯೋಗ ಹಾಗೂ ಅಕ್ರಮ ಸಾಗಾಣಿಕೆ ವಿರುದ್ಧ ಅಂತರರಾಷ್ಟ್ರೀಯ ದಿನಾಚರಣೆ ಹಾಗೂ ವ್ಯಸನ ಮುಕ್ತ ಸಮಾಜ -ನಶೆ ಮುಕ್ತ ಯಾದಗಿರಿ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದದರು.

ಉತ್ತಮ ಆರೋಗ್ಯಕ್ಕೆ ಉತ್ತಮ ಹವ್ಯಾಸಗಳು ಬಹುಮುಖ್ಯ. ಮಾದಕವಸ್ತುಗಳ ಸೇವನೆಯಿಂದ ವ್ಯಕ್ತಿಯು ತನ್ನ ಸರ್ವಸ್ವವನ್ನೂ ಕಳೆದುಕೊಳ್ಳುವ ಜೊತೆಗೆ ಇದು ದೇಶಕ್ಕೂ ಹಾನಿಕಾರಕವಾಗಿದೆ ಎಂದು ಹೇಳಿದರು.

ಜಿಲ್ಲಾಡಳಿತದ ವತಿಯಿಂದ ಪ್ರತಿ ಮಾಹೆ ಸಮನ್ವಯ ಸಮಿತಿ ಸಭೆಗಳ ಮೂಲಕ ತಂಬಾಕು, ಮದ್ಯಪಾನ ನಿಯಂತ್ರಣ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇತ್ತೀಚೆಗೆ ಜಿಲ್ಲಾ ಪೋಲಿಸ್ ಇಲಾಖೆಯಿಂದಲೂ ಕೂಡ ಜಿಲ್ಲೆಯಲ್ಲಿ ಗಾಂಜಾ ಅಕ್ರಮ ಸಾಗಾಣಿಕೆ ವಿರುದ್ಧ ಐದು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹೇಳಿದರು.

ಸಾರ್ವಜನಿಕರು ಕೂಡ ಮದ್ಯಪಾನ ಹಾಗೂ ಮಾದಕ ವಸ್ತುಗಳ ಸೇವನೆಯಿಂದ ದೂರು ಉಳಿಯುವ ಜೊತೆಗೆ ಇದನ್ನು ತಕ್ಷಣ ತ್ಯಜಿಸಬೇಕು. ನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿಯೂ ಕೂಡ ವ್ಯಸನಮುಕ್ತಕ್ಕಾಗಿ ಓಪಿಡಿ ಕೌಂಟರ್ ಸಹ ತೆರೆಯಲಾಗಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ ಅವರು ಮಾತನಾಡಿ, ಅತಿಯಾದ ಸಿಗರೇಟ್, ಗುಟ್ಕಾ, ನಶೆ ಪದಾರ್ಥಗಳ ಸೇವನೆ, ಮದ್ಯಪಾನ ಮಾಡುವ ವ್ಯಕ್ತಿಗಳು ಸಮಾಜ ಹಾಗೂ ಕುಟುಂಬದಿಂದ ದೂರ ಉಳಿಯುತ್ತಾರೆ. ಮಾದಕ ವಸ್ತುಗಳ ಸೇವನೆ ಹಾಗೂ ಮದ್ಯಪಾನದಿಂದ ವ್ಯಕ್ತಿಯು ದುಶ್ಚಟಗಳ ದಾಸರಾಗುತ್ತಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀ ಪೃಥ್ವಿಕ್ ಶಂಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮಹೇಶ್ ಬಿರಾದಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸುಲೈಮಾನ್ ನದಾಫ, ಡಾ.ಜಾಕಾ ಮಾತನಾಡಿದರು.

ಯುವಜನ ಸೇವಾ ಹಾಗೂ ಕ್ರೀಡಾಧಿಕಾರಿ ಶ್ರೀ ರಾಜು ಬಾವಿಹಳ್ಳಿ ಪ್ರತಿಜ್ಞಾ ವಿಧಿ ಬೋಧಿಸಿದರು. ಶಿಲ್ಪಾ ಯೋಗ ಪ್ರದರ್ಶಿಸಿದರು. ಗಿರಿನಗರ ಸಾಂಸ್ಕೃತಿಕ ಕಲಾ ತಂಡದಿಂದ ಕಿರು ನಾಟಕದ ಮೂಲಕ ಜಾಗೃತಿ ಮೂಡಿಸಲಾಯಿತು. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ತಂಡದಿಂದ ರೂಪಕ ಪ್ರದರ್ಶನ ಮೂಲಕ ಅರಿವು ಮೂಡಿಸಲಾಯಿತು. ಡಿವೈಎಸ್ಪಿ ಭರತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಡಿವೈಎಸ್ಪಿ ಜಾವೇದ್ ವಂದಿಸಿದರು.

ಇದಕ್ಕೂ ಮುನ್ನ ಇಂದು ಬೆಳಿಗ್ಗೆ ಸುಭಾಷ್ ಸರ್ಕಲ್ ನಿಂದ ಲುಂಬಿನಿ ಉದ್ಯಾನದವರೆಗಿನ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ಚಾಲನೆ ನೀಡಿದರು. ಜಿ.ಪಂ ಸಿಇಓ ಲವೀಶ್ ಒರಡಿಯಾ, ಎಸ್ಪಿ ಪೃಥ್ವಿಕ್ ಶಂಕರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ ಪೂರ್ಣಿಮಾ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News