ಯಾದಗಿರಿ | ಜಾನಪದ ಕಲೆ, ಸಂಸ್ಕೃತಿ ಉಳಿಸಲು ಎಲ್ಲರೂ ಶ್ರಮಿಸಬೇಕು : ವಿಶ್ವನಾಥ್ ರಡ್ಡಿ
ಯಾದಗಿರಿ: ಪ್ರಸ್ತುತ ಆಧುನಿಕ ದಿನಮಾನಗಳಲ್ಲಿ ಜಾನಪದ ಕಲೆ ಕಣ್ಮರೆಯಾಗುತ್ತಿದ್ದು, ಸರ್ವರೂ ನಮ್ಮ ಪಾರಂಪರಿಕ ನುಡಿ, ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳಸಬೇಕು ಎಂದು ಹಿರಿಯ ಸಾಹಿತಿ ವಿಶ್ವನಾಥ್ ರಡ್ಡಿ ಗೊಂದೆಡಗಿ ಹೇಳಿದರು.
ಬುಧವಾರ ಬೆಳಿಗ್ಗೆ ನಗರದ ಹೈದರಾಬಾದ್ ರಸ್ತೆಯ ಎಸ್ ಡಿ, ಆಂಗ್ಲ ಮಾಧ್ಯಮ ಶಾಲೆಯಲ್ಲಿ 2025 ರ ಜಾನಪದ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ನಮ್ಮ ಪೂರ್ವಜರ ಹಾಡುಗಾರಿಕೆ, ಕಲೆ, ಸಾಹಿತ್ಯ, ಅದರಲ್ಲೂ ಮುಖ್ಯವಾಗಿ ಜಾನಪದ ಹಾಡಿನ ಕಲೆಯು ಅಳಿವಿನಂಚಿನಲ್ಲಿ ಇದ್ದು, ಪ್ರತಿಯೊಬ್ಬರೂ ಇಂತಹ ಅದ್ಭುತ ಪಾರಂಪರಿಕತೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ತೆಗೆದುಕೊಂಡು ಹೋಗಬೇಕು. ಅಂದಾಗ ಮಾತ್ರ ಮುಂದಿನ ನಮ್ಮ ಪೀಳಿಗೆಗೆ ಇದರ ಗುರುತು ತಿಳಿಯುವುದು ಎಂದು ಹೇಳಿದರು.
ಉಪನ್ಯಾಸಕ ಗುರುಪ್ರಸಾದ್ ವೈದ್ಯ, ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಯೇಸುಮಿತ್ರಾ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರು ದುರ್ಗಪ್ಪ ಪೂಜಾರಿ, ಶಾಲಾ ಸಿಬ್ಬಂದಿ, ಪಾಲಕರು ಸೇರಿದಂತೆ ವಿದ್ಯಾರ್ಥಿಗಳು ಇದ್ದರು. ಈ ವೇಳೆಯಲ್ಲಿ ಶಾಲಾ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಗ್ರಾಮೀಣ ಕೃಷಿ ಸಂಬಂಧಿತ ವಸ್ತುಗಳನ್ನು ಪ್ರದರ್ಶಿಸಿದರು.