ಯಾದಗಿರಿ | ತೆಲಂಗಾಣಕ್ಕೆ ನೀರು ಬಿಡುವ ಸರಕಾರದ ಕ್ರಮ ಖಂಡನೀಯ : ರಂಗನಾಥ
ಸುರಪುರ : ನಾರಾಯಣಪೂರ ಬಸವ ಸಾಗರ ಜಲಾಶಯದಿಂದ ತೆಲಂಗಾಣಕ್ಕೆ ರಾತೋರಾತ್ರಿ ನೀರು ಹರಿಸಿರುವ ಸರಕಾರದ ಕ್ರಮ ಖಂಡನೀಯ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಂಗನಾಥಗೌಡ ಭೈರಿಮರಡಿ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೆಬಿಜೆಎನ್‌ಎಲ್ ಅಧಿಕಾರಿಗಳು ರಾತೋರಾತ್ರಿ ಜಲಾಶಯದಿಂದ ತೆಲಂಗಾಣ ರಾಜ್ಯಕ್ಕೆ ನೀರು ಹರಿಸುವ ಮೂಲಕ ನಮ್ಮ ಭಾಗದ ರೈತರಿಗೆ ಅನ್ಯಾಯವೆಸಗುತ್ತಿದ್ದಾರೆ. ಸರಕಾರ ಮತ್ತು ಅಧಿಕಾರಿಗಳು ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವುದು ಸರಿಯಲ್ಲ ಎಂದಿರುವ ಅವರು, ನಮ್ಮ ಭಾಗದ ರೈತರ ಜಮೀನುಗಳಿಗೆ ವಾರಾಬಂದಿ ಪದ್ಧತಿ ಮೂಲಕ ನೀರು ಬಿಡುವ ಆದೇಶ ಹೊರಡಿಸಿರುವ ಸರಕಾರ ಮತ್ತೊಂಡು ಬೇರೆ ರಾಜ್ಯಕ್ಕೆ ನೀರು ಹರಿಸಿರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿರುವ ಅವರು, ಏಪ್ರಿಲ್ ತಿಂಗಳು ಅಂತ್ಯದವರೆಗೆ ನಮ್ಮ ಭಾಗದ ರೈತರಿಗೆ ನೀರು ಹರಿಸಬೇಕಾಗುತ್ತದೆ ಆಗ ಮಾತ್ರ ರೈತರ ಬೆಳೆ ಕೈಗೆ ಬರುತ್ತದೆ.
ಅಲ್ಲದೆ ಅನೇಕ ಊರುಗಳಿಗೆ ಮಳೆಗಾಲ ಆರಂಭಗೊಳ್ಳುವ ಜೂನ್ ತಿಂಗಳುವರೆಗೆ ಕುಡಿಯುವ ನೀರು ಪೂರೈಸುವ ಅವಶ್ಯಕತೆ ಬೀಳುತ್ತದೆ. ಹೀಗಾಗಿ ರಾಜ್ಯ ಸರಕಾರ ಕೂಡಲೇ ಎಚ್ಚೆತ್ತುಕೊಂಡು ನದಿಯ ಮೂಲಕ ತೆಲಂಗಾಣ ರಾಜ್ಯಕ್ಕೆ ನೀರು ಹರಿಸುವದನ್ನು ನಿಲ್ಲಿಸಬೇಕು. ಈ ಭಾಗದ ರೈತರಿಗೆ ನೀರು ಲಭಿಸುವಂತೆ ನೀರನ್ನು ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಒಂದು ವೇಳೆ ನೀರು ಹರಿಸುವುದು ನಿಲ್ಲಿಸದಿದ್ದಲ್ಲಿ ರೈತರೊಂದಿಗೆ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರ ನೀಡಿದ್ದಾರೆ.