ಯಾದಗಿರಿ| ಹೈಕಮಾಂಡ್ ನಿರ್ಧಾರವೇ ಅಂತಿಮ : ಸಿಎಂ ಬದಲಾವಣೆ ಕುರಿತ ವಿವಾದದ ಬಗ್ಗೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಪ್ರತಿಕ್ರಿಯೆ
ಯಾದಗಿರಿ: ರಾಜ್ಯದಲ್ಲಿ ಸಿಎಂ ಕುರ್ಚಿ ಬದಲಾವಣೆ ಬಗ್ಗೆ ನಡೆಯುತ್ತಿರುವ ರಾಜಕೀಯ ಚರ್ಚೆಯ ಬಗ್ಗೆ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಪ್ರತಿಕ್ರಿಯಿಸಿದ್ದಾರೆ.
ರಾಜ್ಯ ಮಟ್ಟದ ಯುವಜನೋತ್ಸವ ಉದ್ಘಾಟನೆ ಸಮಾರಂಭದ ವೇದಿಕೆ ಪರಿಶೀಲನೆ ಮಾಡಿ ಮಾಧ್ಯಮಗಳ ಜೊತೆ ಮಾತನಾಡಿದ ಚೆನ್ನಾರೆಡ್ಡಿ ಪಾಟೀಲ್, ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ 140 ಶಾಸಕರು ಬದ್ದರಾಗಿದ್ದಾರೆ. ರಾಜ್ಯದಲ್ಲಿ ಯಾವುದು ಕುರ್ಚಿ ಖಾಲಿ ಇಲ್ಲ. ಯಾವುದೇ ಬದಲಾವಣೆ ಕೂಡಾ ಆಗುವುದಿಲ್ಲ ಎಂದು ಹೇಳಿದ್ದಾರೆ.
ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಮಾತನಾಡಿದ ಅವರು, ಮೊದಲು ಸಿಎಂ ಬದಲಾವಣೆಯ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಬಹುದು ಅಥವಾ ಸಿಎಂ ಸಿದ್ದರಾಮಯ್ಯ ಮುಂದುವರಿದರೂ ನಂತರ ಸಂಪುಟ ಪುನರ್ ರಚನೆ ಆಗಬಹುದು. ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ನಾನು ಕಿರಿಯ. ನಾಲ್ಕು ಐದು ಬಾರಿ ಗೆದ್ದವರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಹೇಳಿದರು.
ಕಾಂಗ್ರೆಸ್‌ನಲ್ಲಿ ಒಂದು ಬಣ ಇದ್ದರೆ ಅದು ಹೈಕಮಾಂಡ್ ಬಣ ಮಾತ್ರ. ಪಕ್ಷದಲ್ಲಿ ಯಾವುದೇ ಗೊಂದಲವೇ ಇಲ್ಲ. ಗೊಂದಲ ಬೇರೆ ಪಕ್ಷದಲ್ಲಿ ಇರಬಹುದು ಎಂದು ವ್ಯಂಗ್ಯವಾಡಿದರು.