ಯಾದಗಿರಿ | ಯೋಗ, ಧ್ಯಾನಕ್ಕೆ ಭಾರತವೇ ಮೂಲ : ಶಾಸಕ ಚೆನ್ನಾರೆಡ್ಡಿ ಪಾಟೀಲ್
ಯಾದಗಿರಿ: ಆದಿ, ಅನಾದಿ ಕಾಲದಿಂದಲ್ಲೂ ಯೋಗ, ವ್ಯಾಯಾಮ, ಧ್ಯಾನ ಋಷಿ ಮುನಿಗಳು ಮಾಡಿಕೊಂಡ ಬಂದ ಪರಿಣಾಮ ಅವರಿಗೆ ಆಯುಷ್ಯ ಹೆಚ್ಚಿಗೆ ಇತ್ತು ಮತ್ತು ಉತ್ತಮ ಆರೋಗ್ಯ ಹೊಂದಿದ್ದರೆಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಹೇಳಿದರು.
ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಸಭೆ, ಪತಂಜಲಿ ಯೋಗ ಸಮಿತಿ, ಹಾಗೂ ಸರ್ಕಾರದ ಇತರೆ ಇಲಾಖೆ ಮತ್ತು ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ಇಲ್ಲಿನ ಸ್ವಪ್ನಾ ಮೈದಾನದಲ್ಲಿ ಆಯೋಜಿಸಿದ್ದ “11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತೀಯರು ಯೋಗದ ಮೂಲಕವೇ ಅನೇಕ ರೋಗಗಳನ್ನು ಗುಣಪಡಿಸಿಕೊಳ್ಳುವ ಕಾಲವೊಂದಿತ್ತು. ಆದರೆ, ಮುಂದೆ ಇಂಗ್ಲಿಷ್ ಔಷಧಿಗಳಿಗೆ ಮೊರೆ ಹೋಗುವ ಮೂಲಕ ಈ ದೇಸಿ ಪದ್ದತಿ ಮೇಲಿನ ಕಾಳಜಿ ಕಡಿಮೆ ಆಯಿತು. ಆದರೇ ಇತ್ತೀಚಿನ ವರ್ಷಗಳಲ್ಲಿ ಮತ್ತೇ ಜನರು ಯೋಗ ಇತರೇ ದೈಹಿಕ ಕಸರತ್ತಿನ ಮೂಲಕ ತಮ್ಮ, ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತ ಮರಳಿದ್ದಾರೆಂದು ಶಾಸಕರು ವಿವರಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ ಒರಡಿಯಾ, ಜಿಲ್ಲಾ ಮತ್ತು ಕುಟುಂಬದ ಕಲ್ಯಾಣ ಅಧಿಕಾರಿ ಡಾ.ಮಹೇಶ ಬಿರಾದಾರ್, ಸಹಾಯಕ ಆಯುಕ್ತರಾದ ಡಾ.ಹಂಪಣ್ಣ ಸಜ್ಜನ್, ನಗರಸಭೆ ಆಯುಕ್ತರಾದ ಉಮೇಶ ಚವ್ಹಾಣ, ಜಿಲ್ಲಾ ಆಯುಷ್ಯ ಅಧಿಕಾರಿ ಡಾ.ವಂದನಾ ಜೆ.ಗಾಳಿ, ಯೋಗ ಗುರುಗಳಾದ ಸೋಮನಾಥರೆಡ್ಡಿ ಎಲ್ಹೇರಿ, ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನಿರ್ದೇಶ ಪಂಡೀತರಾವ, ರೇಶ್ಮೆ ಇಲಾಖೆ ಸಹಾಯ ಸಂತೋಷ, ವೈದ್ಯಾಧಿಕಾರಿ ಪ್ರಕಾಶ ರಾಜಾಪೂರೆ, ಬ್ರಹ್ಮಾಕುಮಾರಿ ವೀಣಾ ಅಕ್ಕಾ ಇದ್ದರು,
ಯೋಗ ಗುರುಗಳಾದ ಅನೀಲ ಗುರುಜೀ ಅವರು ಶಿಬಿರಾರ್ಥಿಗಳಿಗೆ ಯೋಗ ಹೇಳಿಕೊಟ್ಟು ವಿವಿಧ ಆಸನಗಳು ಮಾಡಿಸಿ, ಮಹತ್ವ ತಿಳಿಸಿದರು. ಯೋಗ ದಿನಾಚರಣೆಯಲ್ಲಿ ಸಾವಿರಾರು ಶಾಲಾ ಮಕ್ಕಳು, ಮಹಿಳೆಯರು, ಪುರುಷರು ಭಾಗವಹಿಸಿದ್ದರು.