ಯಾದಗಿರಿ | ರೈತರು ಮಣ್ಣು, ನೀರಿನ ಸಂರಕ್ಷಣೆ ಮಾಡುವುದು ಅತಿ ಅವಶ್ಯಕ : ಶಿವಶೇಖರ ಸ್ವಾಮಿ
ಯಾದಗಿರಿ : ರೈತರು ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡುವುದು ಅತಿ ಅವಶ್ಯಕವಾಗಿದ್ದು, ಮನೆಗೊಂದು ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರು ಪಾಲುದಾರರಾಗಬೇಕು ಎಂದು ಅಬ್ಬೆ ತುಮಕೂರಿನ ಶ್ರೀ ವಿಶ್ವರಾಧ್ಯ ಸಿದ್ದಸಂಸ್ಥಾನ ಮಠದ ಕಿರಿಯ ಸ್ವಾಮಿಗಳಾದ ಶಿವಶೇಖರ ಸ್ವಾಮಿ ಹೇಳಿದರು.
ತಾಲೂಕಿನ ಅಬ್ಬೆತುಮಕೂರ ಗ್ರಾಮದ ಶ್ರೀ ವಿಶ್ವರಾಧ್ಯ ಸಿದ್ದ ಸಂಸ್ಥಾನ ಮಠದಲ್ಲಿ ಜಿಲ್ಲಾ ಪಂಚಾಯತ್ ಯಾದಗಿರಿ, ಕೃಷಿ ಇಲಾಖೆ ಯಾದಗಿರಿ ವತಿಯಿಂದ ಪ್ರದಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ-ಜಲಾನಯನ ಅಭಿವೃದ್ಧಿ, ಜಲಾನಯನ ಯಾತ್ರೆ ಪ್ರಯುಕ್ತ ಪಾನಿ ಕೀ ಪಾಠಶಾಲಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೇಸಿಗೆ ಆರಂಭವಾಗಿದ್ದು, ನೀರಿನ್ನು ಮಿತವಾಗಿ ಬಳಸಬೇಕು. ಮಾನವ ಹಾಗೂ ಪ್ರಾಣಿ-ಪಕ್ಷಿ ಸಂಕುಲ ಆಹಾರವಿಲ್ಲದೆ ಹಲವಾರು ದಿನಗಳು ಬದುಕಬಹುದು. ಆದರೆ ಕುಡಿಯುವ ನೀರಿಲ್ಲದೆ ಒಂದು ದಿನ ಬದುಕುವುದೂ ಅತೀ ಕಷ್ಟ ಎಂದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುರೇಶ ಮಾತನಾಡಿ, ನೀರನ್ನು ಮಿತವಾಗಿ ಬಳಸಬೇಕು. ನೀರಿನ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅಗತ್ಯವಿದೆ. ನಾವೆಲ್ಲರೂ ಸಂಶೋಧನೆಗಳಿಂದ ಎಷ್ಟೇ ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಮುಂದುವರಿದರೂ, ನಮ್ಮಿಂದ ನೀರನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಸಹಾಯಕ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿಗಳಾದ ಯಾಮರೆಡ್ಡಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಗುರುಗಳಾದ ಬಸವರಾಜ ಬೊಮ್ಮನ, ಟಾಟಾ ಟ್ರಸ್ಟ್ ಕಾರ್ಯಕ್ರಮ ಸಂಯೋಜಕ ಮಂಜುನಾಥ, ಅಬ್ಬೆತುಕೂರಿನ ಪಶು ವೈದ್ಯಾಧಿಕಾರಿ ಡಾ.ಶಿವಮಂಗಲಾ, ತೋಟಗಾರಿಕೆ ವಿಸ್ತಾರಣ ಮುಂದಾಳು ರಾಜಕುಮಾರ, ಸಹಾಯಕ ಕೃಷಿ ನಿರ್ದೇಶಕರು ವಿಷಯ ತಜ್ಷರಾದ ರಾಜಕುಮಾರ, ಅಬ್ಬೆಮಕೂರಿನ ಬಿಎಡ್ ವಿದ್ಯಾರ್ಥಿಗಳು, ಹಾಗೂ ಗ್ರಾಮಸ್ಥರು ಇದ್ದರು.