ಯಾದಗಿರಿ | ಕನ್ನಡ ನಾಡು, ನುಡಿ, ಭಾಷೆ, ಸಂಸ್ಕೃತಿ, ಸಂರಕ್ಷಣೆ ನಮ್ಮೆಲ್ಲರ ಹೊಣೆ : ಗುರಪ್ಪಚಾರ್ಯ
ಯಾದಗಿರಿ : ಕನ್ನಡ ನಾಡು, ನುಡಿ, ಸಾಹಿತ್ಯ, ಸಾಂಸ್ಕೃತಿ, ಜಾನಪದ ಕಲೆಯ ಸಂರಕ್ಷಣೆಯ ಮಹಾದಾಶಯದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತು ಹುಟ್ಟಿಕೊಂಡಿದೆ ಎಂದು ಲಿಂಗೇರಿ ಕೋನಪ್ಪ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯ ಗುರಪ್ಪಾಚಾರ್ಯ ವಿಶ್ವಕರ್ಮ ನುಡಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಜರುಗಿದ 111ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಸಾಂಸ್ಕೃತಿ ಭಾಷೆ ಕಲೆಯನ್ನು ಬೆಳೆಸಬೇಕೆಂಬ ಸದುದ್ದೇಶದಿಂದ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ದಿವಾನರಾಗಿದ್ದ ಸರ್ ಎಂ ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಅವರ ಮಾರ್ಗದರ್ಶನ ಪ್ರೇರಣೆಯಿಂದ ಜನ್ಮ ತಾಳಿದ ಕನ್ನಡ ಸಾಹಿತ್ಯ ಪರಿಷತ್ತು ವಿದೇಶ ಮತ್ತು ಹೊರ ರಾಜ್ಯಗಳಲ್ಲಿ ಕನ್ನಡದ ಬೆಳವಣಿಗೆಗೆ ಜೊತೆಗೆ ಗಡಿನಾಡು ಪ್ರದೇಶದಲ್ಲಿ ಕನ್ನಡದ ಉಳಿವಿಗಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ನ್ಯಾಯವಾದಿ ಗಳಾದ ಚನ್ನಯ್ಯ ಮಾಳಿಕೇರಿ ಮಾತನಾಡಿ, ಮೈಸೂರು ಒಡೆಯರ ಸಾಹಿತ್ಯ ಪ್ರೇಮಿಗಳ ನಾಡು ನುಡಿ ಅಭಿಮಾನಿಗಳ ಶ್ರಮದ ಫಲವಾಗಿ ಕನ್ನಡ ಸಾಹಿತ್ಯ ಪರಿಷತ್ತು ಜಾರಿಗೊಂಡಿದೆ. ಅವರು ಕಷ್ಟಪಟ್ಟು ಕಟ್ಟಿರುವ ಈ ಪರಿಷತ್ತು ಕನ್ನಡದ ಏಳಿಗೆಗೆ ಸದಾ ಸಿದ್ಧವಾಗಿದೆ. ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸ್ವಂತ ಕಟ್ಟಡವನ್ನು ಹೊಂದಲು ಸಿದ್ದಪ್ಪ ಹೊಟ್ಟೆಯವರ ಶ್ರಮ ಮತ್ತು ಕನ್ನಡಪರ ಚಟುವಟಿಕೆ ಕಾರ್ಯಕ್ರಮಗಳ ಸಂಘಟನೆ ಶ್ಲಾಘನೀಯವಾದದ್ದು. ಅವರ ಅಧ್ಯಕ್ಷತೆಯಲ್ಲಿ ಇನ್ನೂ ಅನೇಕ ಹೆಚ್ಚು ಹೆಚ್ಚು ಕಾರ್ಯಕ್ರಮಗಳು ಕನ್ನಡಪರ ಸಂಘಟಿತಗೊಳ್ಳಲಿ ಎಂದು ನುಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಶ್ರೀಶೈಲ್ ಎಂ.ಪೂಜಾರಿ ಕನ್ನಡಿಗರನ್ನು ಒಗ್ಗೂಡಿಸಿ ನಾಡು ನುಡಿ ಅಭಿಮಾನವನ್ನು ಬೆಳೆಸಲು ಕನ್ನಡ ಸಾಹಿತ್ಯ ಪರಿಷತ್ತು ಶತಮಾನದಿಂದ ಕಾರ್ಯಪ್ರವೃತ್ತವಾಗಿದೆ. ಮೇ 5, 1915ರಲ್ಲಿ ಸ್ಥಾಪನೆಗೊಂಡು ಸಾಹಿತ್ಯ ಸಮ್ಮೇಳನಗಳು ಕವಿಗೋಷ್ಠಿಗಳು ದತ್ತಿ ಉಪನ್ಯಾಸಗಳು ಪ್ರಶಸ್ತಿ ಪುರಸ್ಕಾರಗಳನ್ನು ನೀಡುವುದರ ಮೂಲಕ ಪರಿಷತ್ತು ಕನ್ನಡಿಗರ ಜನಸಾಮಾನ್ಯರ ಪರಿಷತ್ತಾಗಿ ರೂಪಗೊಂಡಿದೆ. ಅನೇಕ ಪುಸ್ತಕಗಳನ್ನ ಪ್ರಕಟಣೆಗೊಳಿಸಿದೆ. ಕನ್ನಡ ನುಡಿ ಪತ್ರಿಕೆಯ ಮೂಲಕ ಪರಿಷತ್ತು ಜನಸಾಮಾನ್ಯರನ್ನು ತಲುಪುತ್ತಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಅಜೀವ ಸದಸ್ಯತ್ವವನ್ನು ಹೊಂದಿರುವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಪರಿಷತ್ತು ಆಗಿದೆ. ನಾಡು-ನುಡಿ ಜಲ ಪ್ರಾದೇಶಿಕ ಕಲೆ ಸಾಹಿತ್ಯ ಸಾಂಸ್ಕೃತಿ ಗಳ ಬೆಳವಣಿಗೆಗಾಗಿ ಉಳಿವಿಗಾಗಿ ಅನೇಕ ಹೋರಾಟಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಡಿಕೊಂಡು ಬಂದಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿದ್ದಪ್ಪ ಹೊಟ್ಟಿ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಾಲ್ಕು ಜಿಲ್ಲಾ ಸಮ್ಮೇಳನ 38 ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳನ್ನು ಹೊರತರಲಾಗಿದೆ. ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಜೊತೆಗೆ ಕನ್ನಡದ ನಾಡು ನುಡಿ ಬೆಳವಣಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೆಂಕಟೇಶ ಕಲಕಂಭ ಕಾರ್ಯಕ್ರಮದ ಗೌರವ ಉಪಸ್ಥಿತಿ ವಹಿಸಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಸೋಮಶೇಖರ್ ಮಣ್ಣೂರ, ಬಸವಂತರಾಯ ಗೌಡ ಮಾಲಿಪಾಟೀಲ, ಚೆನ್ನಯ್ಯಸ್ವಾಮಿ, ಚಂದ್ರಶೇಖರ ಅರಳಿ, ಸ್ವಾಮಿದೇವ ದಾಸನಕೇರಿ, ಮಹೇಶ ಪಾಟೀಲ ಕಿಲ್ಲನಕೇರ, ಎಸ್.ಬಿ ನಾಟೇಕಾರ, ನೂರಂದಪ್ಪ ಲೇವಡಿ, ಶರಣು ಅಕ್ಕಿ, ಚೆನ್ನಪ್ಪ ಸಾಹು ಠಾಣಗುಂದಿ, ದೇವೇಂದ್ರರಡ್ಡಿ, ಅಯ್ಯಣ್ಣಗೌಡ ಕ್ಯಾಸಪನಳ್ಳಿ, ಮಲ್ಲು ಹಳಕಟ್ಟಿ ಇತರರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಭೀಮರಾಯ ಲಿಂಗೇರಿ ಕಾರ್ಯಕ್ರಮ ನಿರೂಪಿಸಿದರು. ಸುಭಾಸರೆಡ್ಡಿ ಬೀರನೂರ ಸ್ವಾಗತಿಸಿದರು. ವೀರಭದ್ರಯ್ಯ ಮೋಟಾರ ವಂದನಾರ್ಪಣೆ ಸಲ್ಲಿಸಿದರು.