ಯಾದಗಿರಿ | ರಾಜ್ಯಸರಕಾರದಿಂದ ಎಸ್‌ಸಿಪಿ, ಟಿಎಸ್‌ಪಿ ಹಣ ದುರ್ಬಳಕೆ :ಎನ್.ಮಹೇಶ್ ಆರೋಪ
ಯಾದಗಿರಿ : ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿಕ್ಕಾಗಿ ಮೀಸಲಿಟ್ಟಿರುವ ವಿಶೇಷ ಘಟಕ ಯೋಜನೆ ಮತ್ತು ಬುಡಕಟ್ಟು ಉಪಯೋಜನೆಗಳ ಹಣವನ್ನು ಮುಂಬರುವ ಆರ್ಥಿಕ ವರ್ಷದಲ್ಲೂ ಸಹ ದುರ್ಬಳಕೆ ಮಾಡಿಲು ಸಿದ್ದವಾಗಿದೆ ಎಂದು ಎನ್.ಮಹೇಶ್ ಆರೋಪಿಸಿದರು.
ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,2023-24 ರಲ್ಲಿ 1144 ಕೋಟಿ ರೂ., 2024-25 ರಲ್ಲಿ 14678 ಕೋಟಿ ಹಣವನ್ನು ಐದು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡರು. ಈ ವರ್ಷ 14488 ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲಿಕ್ಕೆ ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹಾದೇವಪ್ಪನವರು ಈಗಾಗಲೇ ಇಲಾಖೆಯಿಂದ ಪ್ರಪೋಸಲ್ ಕಳಿಸಿದ್ದಾರೆ ಎಂದರು.
2023-24 ರಿಂದ ನಿರಂತರವಾಗಿ ಸದನದ ಒಳಗಡೆ ಮತ್ತು ಸದನದ ಹೊರಗಡೆ ಹೋರಾಟ ಮಾಡಿಕೊಂಡು ಬಂದಿದ್ದೀವಿ, ಇದ್ಯಾವುದಕ್ಕೂ ಕ್ಯಾರೆ ಅನ್ನದೆ ಬಂಡತನದಿಂದ ಈ ವರ್ಷನು ಕೂಡ ಎಸ್ಸಿ ಎಸ್ ಟಿ ಗಳ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಅಭಿವೃದ್ಧಿಗೆ ಮಾತ್ರ ಬಳಸಬೇಕಾಗಿರುವ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿರುವುದನ್ನು ವಿರೋಧಿಸಿ 27 ರಿಂದ ಐದು ದಿನಗಳವರೆಗೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ 14 ತಂಡಗಳು ಪ್ರತಿಭಟಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಅದೇ ಮನವಿಯನ್ನ ರಾಜ್ಯ ಪಾಲರಿಗೂ ಸಹ ಸಲ್ಲಿಸುತ್ತಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ರಾಜ್ಯ ಕಾರ್ಯದರ್ಶಿ ಮತ್ತು ನಗರಸಭೆ ಅಧ್ಯಕ್ಷೆ ಕು.ಲಲಿತಾ ಅನಪುರ, ಮಾಜಿ ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ,ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ, ಯುವ ಮುಖಂಡ ಮಹೇಶರಡ್ಡಿ ಮುದ್ನಾಳ, ದೇವಿಂದ್ರನಾಥ ನಾದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮ ಮತ್ತು ಪರುಶುರಾಮ ಕುರಕುಂದಿ, ಜಿಲ್ಲಾ ವಕ್ತಾರ ಹಣಮಂತ ಇಟಗಿ, ದೇವರಾಜ ನಾಯಕ ಉಳ್ಳೆಸುಗುರ, ಜಿಲ್ಲಾ ಮಾಧ್ಯಮ ಸಂಚಾಲಕ ವಿರುಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ ಮತ್ತು ಸಹ ಸಂಚಾಲಕ ಚಂದ್ರಶೇಖರ ಕಡೆಸೂರ ಇದ್ದರು.