ಯಾದಗಿರಿ | ಮಗುವಿಗೆ ಸಂಸ್ಕಾರ, ಸಂಸ್ಕೃತಿ ಕಲಿಸುವ ನಿಜವಾದ ದೇವತೆ ತಾಯಿ : ವಿದ್ಯಾದೇವಿ
ಸೈದಾಪುರ : ಮಗುವಿಗೆ ಸಂಸ್ಕಾರ ಮತ್ತು ಸಂಸ್ಕೃತಿ ಕಲಿಸುವ ನಿಜವಾದ ದೇವತೆ ಮತ್ತು ಗುರು ತಾಯಿ ಎಂದು ಸಿದ್ಧಚೇತನಾಶ್ರಮ ಸಿದ್ಧಾರೂಢ ಮಠದ ಮಾತೋಶ್ರೀ ವಿದ್ಯಾದೇವಿ ಅವರು ತಿಳಿಸಿದರು.
ಪಟ್ಟಣದ ಗುರುಕುಲ ವಿದ್ಯಾಪೀಠ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ ಮಾತೃಮಿಲನ ಹಾಗೂ ಕೈತುತ್ತೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜಗತ್ತಿನ ಮಕ್ಕಳ ಪಾಲಿನ ಮೊದಲ ದೇವರು ತಾಯಿ. ಮಗುವಿಗೆ ಲಾಲನೆ ಪಾಲನೆ ಮಾಡುವುದರ ಜೊತೆಗೆ ಅವರನ್ನು ಸಮಾಜದ ಉನ್ನತ ನಾಗರಿಕನ್ನಾಗಿ ಮಾಡುವ ದೊಡ್ಡ ಜವಬ್ದಾರಿಯನ್ನು ನಿರ್ವಹಿಸುವವಳು ತಾಯಿ. ಧೈರ್ಯ, ಸಾಹಸ, ತ್ಯಾಗದ ಗುಣಗಳನ್ನು ಮೈಗೂಡಿಸುವ ತಾಯಿಗೆ ಸಮನಾವಾದವರು ಮತ್ತೊಬ್ಬರಿಲ್ಲ. ಚಿಕ್ಕವಯಸ್ಸಿನಲ್ಲಿಯೇ ಮಕ್ಕಳಿಗೆ ಬದುಕಿನ ಸ್ವಾರಸ್ಯವನ್ನು ತಿಳಿಸಿಕೊಟ್ಟು ಜ್ಞಾನಿಗಳನ್ನಾಗಿ ಪರಿವರ್ತಿಸುವವಳು ತಾಯಿ. ಇಂದಿನ ತಂದೆ ತಾಯಿಗಳು ತಮ್ಮ ಒತ್ತಡ ಜೀವನದ ಮಧ್ಯೆ ಮಕ್ಕಳಿಗೆ ಮೊಬೈಲ್ ಗೀಳು ಅಂಟಿಸುತ್ತಿದ್ದಾರೆ. ನಾವು ಯಾವಾಗ ಮನೆಯಲ್ಲಿ ಮಕ್ಕಳಿಗೆ ರಾಮಾಯಣ, ಮಹಾಭಾರದಂತಹ ಜೀವನ ಮೌಲ್ಯಗಳನ್ನು ಬೋಧಿಸುವ ಕ್ರಮವು ಮರೆಯಾಗುತ್ತಿರುವುದರಿಂದ ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಆದ್ದರಿಂದ ಮನೆಗಳು ಮತ್ತು ತಾಯಂದಿರು ಸಮಾಜದಲ್ಲಿನ ಮಕ್ಕಳಿಗೆ ಸಂಸ್ಕಾರ ನೀಡುವ ಕೇಂದ್ರ ಹಾಗೂ ಗುರುವಾಗಿ ನಿರ್ಮಾಣವಾಗಬೇಕು ಎಂದರು.
ಇದಕ್ಕೂ ಮೊದಲು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ತಾಯಂದಿರು, ಮನೆಯಿಂದ ಮಕ್ಕಳಿಗಾಗಿ ಸಿದ್ಧಪಡಿಸಿಕೊಂಡು ಬಂದಿದ್ದ ವಿವಿಧ ಖಾದ್ಯಗಳನ್ನು ತಮ್ಮ ಮಕ್ಕಳಿಗೆ ಕೈತುತ್ತೂಟ ಮಾಡಿಸಿದರು. ನಂತರ ನಿಂಬೆ ಹಣ್ಣು, ಚಮಚ, ಬಲೂನ್, ಮಕ್ಕಳನ್ನು ಗುರುತಿಸುವುದು, ಮ್ಯೂಸಿಕಲ್ ಚೇರ್ ಸೇರಿದಂತೆ ಹಲವು ಬಗೆಯ ಮನೋರಂಜನೆಯ ಆಟಗಳನ್ನು ಏರ್ಪಡಿಸಿ ಬಹುಮಾನ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ರಾಜು ದೊರೆ, ಸೌಭಾಗ್ಯ ಚಂದ್ರಸೇಖರ್ ಕರಣಿಗಿ, ಮುಖ್ಯಶಿಕ್ಷಕ ಮಲ್ಲಿಕಾರ್ಜುನ, ಮರಿಲಿಂಗಮ್ಮ, ಮಹೇಶ್ವರಿ, ಆಸೀಫಾ, ಸಾನಿಯಾ ಸಮರೀನ್, ಸ್ವಾತಿ, ನಾಗಮ್ಮ, ಹೃತಿಕಾ, ಆನಂದಕೃಷ್ಣಾ, ಸಹಾಯಕಿ ಸುಕುಮಾರಿ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಇತರರಿದ್ದರು.