ಯಾದಗಿರಿ | ಸಮಾಜ ನಿಮ್ಮನ್ನು ಗುರುತಿಸಲು ದಾಸೋಹಿಗಳಾಗಿ : ಶಾಂತಮೂರ್ತಿ ಶಿವಾಚಾರ್ಯ
ಸುರಪುರ : ಜೀವನದಲ್ಲಿ ಸಂಪತ್ತು, ಆಸ್ತಿ ಗಳಿಸುವುದು ದೊಡ್ಡದಲ್ಲ, ಇದರಿಂದ ಸಮಾಜ ಗುರುತಿಸುವುದಿಲ್ಲ ಅದಕ್ಕಾಗಿ ಪ್ರತಿಯೊಬ್ಬರೂ ಗಳಿಸಿದ ಹಣದಲ್ಲಿ ಅಲ್ಪ ಸ್ವಲ್ಪವಾದರೂ ಸಾಮಾಜಿಕ, ಧಾರ್ಮಿಕ ಹಾಗೂ ಮುಂತಾದ ಕಾರ್ಯಗಳಿಗೆ ವಿನಿಯೋಗಿಸಿದಾಗ ಸಮಾಜ ನಿಮ್ಮನ್ನು ಗುರುತಿಸುತ್ತದೆ ಆದ್ದರಿಂದ ಸಮಾಜಕ್ಕಾಗಿ ಎಲ್ಲರು ದಾಸೋಹಿಗಳಾಗಿ ಎಂದು ರುಕ್ಮಾಪುರ ಹಿರೇಮಠದ ಶಾಂತಮೂರ್ತಿ ಶಿವಾಚಾರ್ಯರು ಹೇಳಿದರು.
ನಗರದ ತಿಮ್ಮಾಪುರದ ಗುಮ್ಮಾ ಅವರ ನಿವಾಸದ ಹತ್ತಿರದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ನಿಮಿತ್ತ ಹಮ್ಮಿಕೊಂಡಿರುವ 20 ನೇ ವರ್ಷದ ಶರಣ ಬಸವೇಶ್ವರ ಪುರಾಣ ಪ್ರವಚನದ ಕೊನೆಯ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಮಾನವ ಮಹಾದೇವನಾಗಬಲ್ಲ, ಕಿಂಕರನಾಗಿ ಪೂಜಿಸಿದೊಡೆ ಶಂಕರನೂ ಒಲಿಯುತ್ತಾನೆ ಎಂದು ಆರ್ಶಿವರ್ಚನ ನೀಡಿದರು.
ಸನ್ಮಾನ ಸ್ವೀಕರಿಸಿದ ಚುಟುಕು ಸಾಹಿತಿ ಶರಣಗೌಡ ಪಾಟೀಲ ಜೈನಾಪುರವರು ,ಶರಣರು ನುಡಿದರೆ ವಚನವಾಗುತ್ತದೆ ಶರಣರು ನಡೆದದ್ದು ಮಾರ್ಗವಾಗುತ್ತದೆ ಶರಣರು ನೆಲೆಸಿದ ಸ್ಥಳ ಸುಕ್ಷೇತ್ರವಾಗುತ್ತದೆ , ಇದಕ್ಕೇ ಇಲ್ಲಿಯ ಗುಮ್ಮಾನವರ ನಿವಾಸ ಸಾಕ್ಷಿಯಾಗಿದೆ ಎಂದರು.
ವೇದ ಮೂರ್ತಿ ನಾಗಲಿಂಗಯ್ಯ ಶಾಸ್ತ್ರೀಗಳು, ತದ್ದೇವಾಡಿ ಹಿರೇಮಠದ ಮಹಾಂತೇಶ ಸ್ವಾಮಿಗಳು, ಬನಶಂಕರಿ ದೇವಸ್ಥಾನದ ಅರ್ಚಕ ನಿಂಗಯ್ಯ ಸ್ವಾಮಿ ಹಿರೇಮಠ ಉಪಸ್ಥಿತರಿದ್ದರು. ದೇವಾಂಗ ಸಮಾಜದ ಅಧ್ಯಕ್ಷ ಶರಣಪ್ಪ ಗುಮ್ಮಾ ಅವರು ಪ್ರಾಸ್ತಾವಿಕ ಮಾತನಾಡಿದರು. ನೂರಾರು ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.ಪ್ರಸಾದ ವಿತರಣೆ ಕಾರ್ಯಕ್ರಮವೂ ನಡೆಯಿತು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಶರಣಗೌಡ ಪಾಟೀಲ ಜೈನಾಪುರ (ಶಿಕ್ಷಣ ಮತ್ತು ಸಾಹಿತ್ಯ). ಡಾ, ಮಲ್ಲೇಶಿ ಪೂಜಾರಿ (ವೈದ್ಯಕೀಯ) ವೆಂಕಟರೆಡ್ಡಿ( ಕೃಷಿ) ಶ್ರೀಕರ್ ಭಟ್ ಜೋಶಿ,( ಪತ್ರಿಕೋದ್ಯಮ) ರತ್ನಾಕರ ಕಾಶಿನಾಥಪ್ಪ ಬಣಗಾರ (ಸಂಗೀತ) ಅವರನ್ನು ಶರಣಶ್ರೀ ಪ್ರಶಸ್ತಿ ಪತ್ರ ನೀಡಿ ಗೌರವಿಸಿ ಸನ್ಮಾನಿಸಲಾಯಿತು.