ಯಾದಗಿರಿ | ಸ್ವಾತಂತ್ರ್ಯೋತ್ಸವ ದಿನಾಚರಣೆಯ ಸಕಲ ಸಿದ್ಧತೆಗೆ ಡಿಸಿ ಸೂಚನೆ
ಯಾದಗಿರಿ: ಆ.15 ರಂದು ನಡೆಯುವ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಜಿಲ್ಲಾಡಳಿತ ವತಿಯಿಂದ ಅರ್ಥಪೂರ್ಣವಾಗಿ ಹಾಗೂ ಸಂಭ್ರಮದಿಂದ ಅಚ್ಚುಕಟ್ಟಾಗಿ ಆಚರಿಸಿ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಶ್ರೀ ಹರ್ಷಲ್ ಭೋಯರ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಿನ್ನೆ ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆ ಕುರಿತ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು .
ಕಾರ್ಯಕ್ರಮವು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಅಚ್ಚುಕಟ್ಟಾಗಿ ಹಮ್ಮಿಕೊಳ್ಳಬೇಕು. ಅಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾಡಳಿತ ವತಿಯಿಂದ ನಡೆಯುವ ಧ್ವಜಾರೋಹಣ ಕಾರ್ಯಕ್ರಮಕ್ಕೆ, ಸಂಬಂಧಿಸಿದ ಅಧಿಕಾರಿಗಳು ಅವಶ್ಯಕ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ವೇದಿಕೆ ಸಿದ್ದತೆ, ಶಿಷ್ಟಾಚಾರ ದಂತೆಗಣ್ಯರಿಗೆ ಆಸನದ ವ್ಯವಸ್ಥೆ ಮಾಡಿಕೊಳ್ಳಬೇಕು. ಶಿಷ್ಠಾಚಾರದಂತೆ ಅತಿಥಿ ಗಣ್ಯರನ್ನು ಆಹ್ವಾನಿಸಬೇಕು. ಆಹ್ವಾನ ಪತ್ರಿಕೆ ಮುದ್ರಿಸಬೇಕು. ಕವಾಯತು ಅತ್ಯುತ್ತಮವಾಗಿ ನಡೆಸಲು ಪೂರ್ವಭಾವಿ ತರಬೇತಿ, ಸಿದ್ದತೆ ಮಾಡಿಕೊಳ್ಳಬೇಕು. ಶಾಮಿಯಾನಾ, ವಿದ್ಯಾರ್ಥಿ, ಸಾರ್ವಜನಿಕರಿಗೆ ಪ್ರತ್ಯೇಕವಾಗಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಚಿಕಿತ್ಸಾ ಅಂಬ್ಯುಲನ್ಸ್ ನುರಿತ ವೈದ್ಯರೊಂದಿಗೆ ಹಾಗೂ ಅಗ್ನಿಶಾಮಕ ವಾಹನದ ವ್ಯವಸ್ಥೆ ಮಾಡಬೇಕು. ಮೈದಾನದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ, ಸ್ವಚ್ಛತೆ ನಿರ್ವಹಿಸಬೇಕು ಎಂದರು.
ದೀಪಾಲಂಕಾರ, ಇನ್ನಿತರ ಕಾರ್ಯಕ್ರಮ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸುವ ಕುರಿತು ಭಾವೈಕ್ಯತಾ ಸಮಿತಿ ಹಾಗೂ ಡಿಡಿಪಿಐ ಸಮನ್ವಯತೆಯಿಂದ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು, ಸರ್ಕಾರೇತರ ಸಂಘ ಸಂಸ್ಥೆಗಳವರು, ಭಾಗ ವಹಿಸಬೇಕು. ವಿವಿಧ ಸಮಿತಿಗಳನ್ನು ರಚಿಸಲು ಹಾಗೂ ಸಂಬಂಧಿಸಿದ ಸಮಿತಿಯ ಅಧಿಕಾರಿಗಳು ಕಾಲ ಕಾಲಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ,ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಲು ಅವರು ಸೂಚಿಸಿದರು.
ಅದರಂತೆ ಎಲ್ಲ ತಾಲೂಕು ಮಟ್ಟದಲ್ಲಿ ಮಾರ್ಗಸೂಚಿ ಅನ್ವಯ, ಶಿಷ್ಟಾಚಾರ ಪಾಲನೆ ಮತ್ತು ವೇದಿಕೆ ನಿರ್ಮಾಣ ಸೇರಿದಂತೆ ಇನ್ನಿತರ ವ್ಯವಸ್ಥೆಗಳನ್ನು ನೋಡಿಕೊಳ್ಳುವಂತೆ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು. ಜಿಲ್ಲಾಮಟ್ಟದಲ್ಲಿ ಧ್ವಜಾರೋಹಣ ಹಿನ್ನಲೆಯಲ್ಲಿ ರಾಷ್ಟ್ರಗೀತೆ, ನಾಡಗೀತೆ, ಧ್ವಜಾರೋಹಣ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಿಗದಿತ ಸಮಯದಲ್ಲಿ ಆರಂಭಗೊಂಡು, ಯಶಸ್ವಿಯಾಗಿ ಮುಕ್ತಾಯಗೊಳ್ಳುವಂತೆ ನೋಡಿಕೊಳ್ಳಬೇಕು. ಅದರಂತೆ ಇನ್ನಿತರ ಅಗತ್ಯ ಸಿದ್ದತೆಗಳನ್ನು ಮಾಡಿಕೊಂಡು ಅಚ್ಚುಕಟ್ಟಾಗಿ ನಿರ್ವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಅವರು ನಿರ್ದೇಶನ ನೀಡಿದರು.
ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ, ಅಗ್ನಿಶಾಮಕದಳ, ಸೇರಿದಂತೆ ಕವಾಯತು ತಂಡಗಳನ್ನು ರಚಿಸಿಬೇಕು. ಜಿಲ್ಲೆಯ ವಿವಿಧ ಕಾರ್ಯಕ್ರಮಗಳ ಯಶಸ್ವಿಗೆ ಅಧಿಕಾರಿಗಳು ನೆರವಾಗಬೇಕು ಎಂದರು.
ತಾಲೂಕುಗಳಲ್ಲಿಯೂ ಸಹ ಆಯಾ ತಹ ಶೀಲ್ದಾರರು ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ತಾಲೂಕಾಡಳಿತ ವತಿಯಿಂದ ಮಾರ್ಗ ಸೂಚಿಗಳನ್ವಯ ಆಯೋಜಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು
ಈ ಸಂದರ್ಭದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ್, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ಭಾವೈಕ್ಯತಾ ಸಮಿತಿ ಮುಖಂಡರಾದ ಬಾಬು ದೋಖಾ, ಕ್ರೀಡಾ ಇಲಾಖೆ ಅಧಿಕಾರಿ ರಾಜು ಬಾವಿಹಳ್ಳಿ, ಯಾದಗಿರಿ ತಹಶೀಲ್ದಾರ ಸುರೇಶ ಅಂಕಲಗಿ ಸೇರಿದಂತೆ ಇನ್ನಿತರ ಜಿಲ್ಲಾಮಟ್ಟದ ಮತ್ತು ತಾಲೂಕು ಅಧಿಕಾರಿಗಳು ಉಪಸ್ಥಿತರಿದ್ದರು.