ಯಾದಗಿರಿ | ಅನಧಿಕೃತ ಮುರಂ ಗಣಿಗಾರಿಕೆಗಳಿಗೆ ಜಿಲ್ಲಾಧಿಕಾರಿಗಳಿಂದ ದಿಢೀರ್ ಭೇಟಿ, ಪರಿಶೀಲನೆ
ಯಾದಗಿರಿ: ಜಿಲ್ಲೆಯ ಸೈದಾಪೂರ ಹೊಬಳಿಯ ಕಡೇಚೂರು ಗ್ರಾಮದ ಸರ್ವೆ ನಂ. 421, 423/4, 425 & 418/ಪೂರ್ಟ -2/3 ರ ಜಮೀನುಗಳಲ್ಲಿ ಅನಧಿಕೃತವಾಗಿ ಮುರಂ ಗಣಿಗಾರಿಕೆ ಮಾಡಿ ಸಾಗಾಣಿಕೆ ಮಾಡಿರುವ ಪಟ್ಟಾ ಜಮೀನುಗಳ ಪರಿಶೀಲನೆಗೆ ಜಿಲ್ಲಾಧಿಕಾರಿಗಳಾದ ಹರ್ಷಲ್ ಭೋಯರ್ ಅವರು ಗುರುವಾರದಂದು ದಿಢೀರನೆ ಭೇಟಿ ನೀಡಿ, ಪರಿಶೀಲಿಸಿದರು.
ಅನಧಿಕೃತವಾಗಿ ಮುರಂ ಗಣಿಗಾರಿಕೆ ಮಾಡಿ ಸಾಗಾಣಿಕೆ ಮಾಡಿರುವ ಬಗ್ಗೆ ತಾಲ್ಲೂಕು ಮಟ್ಟದ ಅಧಿಕಾರಿಗಳ ತಂಡವನ್ನು ರಚಿಸಿ ಕೂಡಲೇ ವರದಿಯನ್ನು ಸಲ್ಲಿಸುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿಲ್ಲಾಧಿಕಾರಿಗಳು ಈ ಸರ್ವೆ ನಂಬರ್‌ಗಳಲ್ಲಿ ಅನಧಿಕೃತವಾಗಿ ಗಣಿಗಾರಿಕೆ ಹಾಗೂ ಸಾಗಾಣಿಕೆಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಕಡೆಚೂರು ಗ್ರಾಮದ ಸರ್ವೆ ನಂಬರ್ 423ರ ಸಂಬಂಧವಾಗಿ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪೃಥ್ವಿಕ್ ಶಂಕರ್ , ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಅಧಿಕಾರಿ ಪೂರ್ಣಿಮಾ, ಯಾದಗಿರಿ ತಹಶೀಲ್ದಾರರಾದ ಸುರೇಶ್ ಅಂಕಲಗಿ, ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕರು ಸೇರಿದಂತೆ ಇತರರು ಇದ್ದರು.