ಯಾದಗಿರಿ | ರಸಗೊಬ್ಬರ ನೀಡಲು ಆಗ್ರಹಿಸಿ ಕೃಷಿ ಕಚೇರಿ ಮುಂದೆ ರೈತ ಸಂಘದಿಂದ ಪ್ರತಿಭಟನೆ
ಸುರಪುರ: ರೈತರಿಗೆ ರಸಗೊಬ್ಬರ ಮಾರಾಟ ಅಂಗಡಿಗಳಲ್ಲಿ ರಸಗೊಬ್ಬರ ದೊರೆಯುತ್ತಿಲ್ಲ. ಇದರಿಂದ ಸುರಪುರ ಮತ್ತು ಹುಣಸಗಿ ತಾಲೂಕಿನ ರೈತರಿಗೆ ತುಂಬಾ ತೊಂದೆರೆಯಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ಮುಖಂಡರು ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ರೈತರು ಮಳೆ ಬಂದಿದೆ ಎನ್ನುವ ಖುಷಿಯಲ್ಲಿ ಹತ್ತಿ, ಶೇಂಗಾ, ಸಜ್ಜೆ ಮತ್ತಿತರೆ ಬೆಳೆಗಳನ್ನು ಬೆಳೆಯುತ್ತಿದ್ದು, ಬೆಳೆಗಳಿಗೆ ಅಗತ್ಯವಾದ ರಸಗೊಬ್ಬರ ಅಂಗಡಿಗಳಲ್ಲಿ ದೊರೆಯುತ್ತಿಲ್ಲ. ಇದರಿಂದ ಬೆಳೆಗಳು ಒಣಗುವ ಸಂಭವವಿದ್ದು, ಕೂಡಲೇ ರೈತರಿಗೆ ಅಗತ್ಯವಿರುವ ರಸಗೊಬ್ಬರ ದೊರೆಯಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಕೃಷಿ ಸಹಾಯಕ ನಿರ್ದೇಶಕ ರಾಮನಗೌಡ ಪಾಟೀಲ್ ಮಾತನಾಡಿ, ರೈತರು ರಸಗೊಬ್ಬರ ಇದೇ ಬೇಕು ಎಂದು ಖರೀದಿಸುವ ಬದಲು ಬೆಳೆಗಳಿಗೆ ಬೇಕಾದ ಪೋಷಕಾಂಶಗಳಿರುವ ರಸಗೊಬ್ಬರಗಳು ಅಂಗಡಿಗಳಲ್ಲಿ ಲಭ್ಯವಿವೆ. ಅವುಗಳನ್ನು ಖರೀದಿ ಮಾಡಿ ಬೆಳೆಗಳಿಗೆ ಹಾಕುವ ಮೂಲಕ ಬೆಳೆ ರಕ್ಷಣೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಬಾವಿ, ತಾಲೂಕು ಅಧ್ಯಕ್ಷ ಹಣಮಂತ್ರಾಯ ಚಂದಲಾಪುರ, ತಾ.ಕಾರ್ಯದರ್ಶಿ ವೆಂಕಟೇಶ ಕುಪಗಲ್, ಮಲ್ಲಣ್ಣ ಹಾಲಬಾವಿ, ಸಾಹೇಬಗೌಡ ಮದಲಿಂಗನಾಳ, ದೇವಿಂದ್ರಪ್ಪ ತಿಪ್ಪನಟಗಿ, ಭೀಮಣ್ಣ ತಿಪ್ಪನಟಗಿ, ಭೀಮನಗೌಡ ಕರ್ನಾಳ, ತಿಪ್ಪಣ್ಣ ಜಂಪಾ, ನಾಗಪ್ಪ ಕುಪಗಲ್, ಶಿವನಗೌಡ ರುಕ್ಮಾಪುರ, ಮೌನೇಶ ಅರಳಹಳ್ಳಿ, ಪ್ರಭು ದೊರಿ, ತಿಪ್ಪಣ್ಣ ತಳವಾರ, ಗದ್ದೆಪ್ಪ ನಾಗಬೇವಿನಾಳ, ಹನುಮಗೌಡ ನಾರಾಯಣಪುರ, ನಿಂಗನಗೌಡ ಗುಳಬಾಳ, ಭೀಮರಾಯ ಒಕ್ಕಲಿಗ, ಖುದಾಭಕ್ಷ, ಯಂಕೋಬ ದೊರೆ ಕಪಗಲ್, ತಿರುಪತಿ ಕುಪಗಲ್, ಯಂಕಪ್ಪ ದಾಸರ ಸೇರಿದಂತೆ ಅನೇಕರು ಭಾಗವಹಿಸಿದ್ದರು.