ಯಾದಗಿರಿ | ಮಳೆ ಹಾನಿ ಪರಿಹಾರ ನೀಡದಿದ್ದರೆ ತೀವ್ರ ಹೋರಾಟ : ಹಣುಮೇಗೌಡ ಬೀರನಕಲ್
ಯಾದಗಿರಿ: ಸತತ ಮಳೆ ಮತ್ತು ಪ್ರವಾಹದಿಂದ ಜಿಲ್ಲೆಯಲ್ಲಿ ಹಾನಿಯಾದ ಬೆಳೆಗೆ ಒಂದು ತಿಂಗಳಲ್ಲಿ ಪರಿಹಾರ ನೀಡದಿದ್ದರೆ ಡಿ.3 ರಿಂದ ಜಿಲ್ಲೆಯಲ್ಲಿ ತೀವ್ರ ಹೋರಾಟ ನಡೆಸಲಾಗುವುದೆಂದು ಹಿರಿಯ ರೈತ ಹೋರಾಟಗಾರ ಹಣುಮೇಗೌಡ ಬೀರನಕಲ್ ಎಚ್ಚರಿಸಿದ್ದಾರೆ.
ಸೋಮವಾರ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದ ರೈತರ ಪ್ರತಿಭಟನೆಯಲ್ಲಿ ಮಾತನಾಡಿದ ಹಣುಮೇಗೌಡ ಬೀರನಕಲ್, ಪರಿಹಾರ ವಿಳಂಬದಿಂದ ರೈತರು ಆತ್ಮಹತ್ಯೆ ದಾರಿ ತುಳಿದರೆ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದರು.
ಬೆಳೆ ಹಾನಿ, ಮನೆ ಮತ್ತು ಜಾನುವಾರುಗಳನ್ನು ಕಳೆದುಕೊಂಡ ಬಗ್ಗೆ ವೈಮಾನಿಕ ಸಮೀಕ್ಷೆ ಮತ್ತು ಜಿಲ್ಲಾಡಳಿತದಿಂದ ಸರಕಾರಕ್ಕೆ ವರದಿ ಸಲ್ಲಿಕೆಯಾಗಿ ಒಂದು ತಿಂಗಳಾಯಿತು. ಆದರೂ ಪರಿಹಾರ ನೀಡುವ ನಿಟ್ಟಿನಲ್ಲಿ ಯಾವುದೇ ಕ್ರಮ ಆಗುತ್ತಿಲ್ಲ ಎಂದು ದೂರಿದರು.
ಜಿಲ್ಲೆಯಲ್ಲಿ ಲಕ್ಷಾಂತರ ಎಕರೆ ಬೆಳೆ ಹಾನಿಯಾಗಿದೆ. ಸುಮಾರು 500ಕ್ಕೂ ಹೆಚ್ಚು ಮನೆಗಳು ಹಾನಿಯಾಗಿದೆ. ಜಾನುವಾರುಗಳು ಸತ್ತಿವೆ. ಮೂರಕ್ಕೂ ಹೆಚ್ಚು ಜನರ ಪ್ರಾಣ ಹಾನಿಯಾಗಿದೆ. ಆದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎಂದೂ ದೂರಿದರು.
ಈ ವೇಳೆ ರುದ್ರಾಂಬಿಕಾ ಪಾಟೀಲ್, ಐಕೂರ ಅಶೋಕ್, ರಾಜಶೇಖರ್ ಹಾಲಗೇರ, ಹಣಮಂತ್ರಾಯ್ ಗೌಡ ತೇಕರಳ, ಅಶೋಕ ವಾಟಕರ್, ವಿಜಯ ಕುಮಾರ,ಕಾಶೀನಾಥ್ ನಾಟೆಕಾರ್, ವಿಶ್ವನಾಥ್ ನಾಯಕ, ವಿಜಯ ಕುಮಾರ್, ಸಿಮಾನ ತುಮಕೂರ್, ಶರಣು, ನಾಗರಾಜ್ ರಾಮಸಮುದ್ರ, ವಿಜಯ ಕುಮಾರ ಮುಷ್ಟೂರ್. ಸೋಯಾಬ್, ಮಲ್ಲು ತುಮಕೂರು ಸೇರಿದಂತೆಯೇ ಇತರರು ಉಪಸ್ಥಿತರಿದ್ದರು.