ಯಾದಗಿರಿ | ಹದಗೆಟ್ಟ ರಾಜ್ಯ ಹೆದ್ದಾರಿ ಸರಿಪಡಿಸಲು ಮಹೇಶರಡ್ಡಿ ಮುದ್ನಾಳ್ ಆಗ್ರಹ
ಯಾದಗಿರಿ : ನಗರದ ಹಳೇ ಬಸ್ ನಿಲ್ದಾಣದಿಂದ ವಡಗೇರಾ ಕ್ರಾಸ್ ವರೆಗೆ ಮತ್ತು ನಾಯ್ಕಲ್ ಗ್ರಾಮದಿಂದ ಮನಗನಾಳ ಗ್ರಾಮದ ವರೆಗೆ ಹಾಗೂ ಖಾನಾಪೂರದಿಂದ ದೋರನಹಳ್ಳಿ ಮಾರ್ಗವಾಗಿ ಶಹಾಪೂರಕ್ಕೆ ಹೋಗುವ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ರಾಜ್ಯ ಹೆದ್ದಾರಿಯನ್ನು ಕೂಡಲೇ ಸರಿಪಡಿಸಲು ಯುವ ಮುಖಂಡ ಮಹೇಶರಡ್ಡಿ ಮುದ್ನಾಳ್ ಆಗ್ರಹಿಸಿದ್ದಾರೆ.
ಜಿಲ್ಲಾ ಮಟ್ಟದ ಅಧಿಕಾರಿಗಳು ದಿನಾಲೂ ಈ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದರೂ, ಕಣ್ಮುಚ್ಚಿ ಹೋಗುತ್ತಿದ್ದಾರೆ. ಹಲವಾರು ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ದೋರನಹಳ್ಳಿ ಗ್ರಾಮದಲ್ಲಿ ರಸ್ತೆ ಮಾಯವಾಗಿ ಭತ್ತದ ಗದ್ದೆಯಂತಾಗಿ ರಸ್ತೆಯನ್ನು ಹುಡುಕಾಡುವ ಸ್ಥಿತಿ ಎದುರಾಗಿದೆ. ಮಹಿಳೆಯರಿಗೆ, ವಾಹನ ಸವಾರರಿಗೆ ಹಾಗೂ ಮಕ್ಕಳಿಗೆ ಏನಾದರೂ ಇದರಿಂದ ಅನಾಹುತ ಆದರೆ ಲೋಕೋಪಯೋಗಿ ಇಲಾಖೆಯೇ ನೇರ ಕಾರಣರವಾಗುತ್ತಾರೆ. ಲೋಕೋಪಯೋಗಿ ಇಲಾಖೆಯ ಅಡಿಯಲ್ಲಿ ಇರುವ ಈ ರಸ್ತೆಯನ್ನು ಸಂಪೂರ್ಣವಾಗಿ ಒಂದು ವಾರದೊಳಗೆ ಸರಿ ಮಾಡದಿದ್ದರೆ ಲೋಕೋಪಯೋಗಿ ಇಲಾಖೆಯ ಮುಂಭಾಗದಲ್ಲಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.