ಯಾದಗಿರಿ | ಪ್ರಗತಿ ಪರಿಶೀಲನಾ ಸಭೆ
ಸುರಪುರ : ಸಭೆಗೆ ಬರುವ ಅಧಿಕಾರಿಗಳು ಸಮಗ್ರ ಮಾಹಿತಿಯೊಂದಿಗೆ ಸಭೆಗೆ ಬರುವಂತೆ ಶಾಸಕ ರಾಜಾ ವೇಣುಗೋಪಾಲ ನಾಯಕ ತಿಳಿಸಿದರು.
ನಗರದ ತಾಲೂಕ ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನೆ(ಕೆಡಿಪಿ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನಾದ್ಯಂತ ಎಲ್ಲಿಯೂ ವಿದ್ಯುತ್ ಮತ್ತು ರಸ್ತೆ ಸಮಸ್ಯೆ, ಶಿಕ್ಷಣ ಸಮಸ್ಯೆ ಆಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಯಾವುದೇ ರೀತಿಯ ಸಹಾಯಕ್ಕೆ ನಾನು ಸದಾಕಾಲ ಸಿದ್ಧವಿದ್ದು, ಏನೆ ಸಮಸ್ಯೆ ಇದ್ದರು ನಮ್ಮ ಗಮನಕ್ಕೆ ತಂದಲ್ಲಿ ಪರಿಹರಿಸಲಾಗುವುದು ಎಂದು ತಿಳಿಸಿದರು.
ಲೋಕೋಪಯೋಗಿ ಇಲಾಖೆ ಎಇಇ ಎಸ್.ಜಿ ಪಾಟೀಲ್ ಮಾತನಾಡಿ, ತಾಲೂಕಿನಲ್ಲಿ 8 ರಾಜ್ಯ ಹೆದ್ದಾರಿಗಳು, 34 ಜಿಲ್ಲಾ ಹೆದ್ದಾರಿಗಳಲ್ಲಿನ ಗುಂಡಿಗಳ ಮುಚ್ಚಲು 6 ಕೋಟಿ ರೂ. ಅನುದಾನ ಬಂದಿದೆ. ಅಲ್ಲದೆ ಒಟ್ಟು 21 ಕಾಮಗಾರಿಗಳು ನಿರ್ಮಿಸಲಾಗುತ್ತಿದ್ದು, ಅದರಲ್ಲಿ 18 ಕಾಮಗಾರಿಗಳು ಪ್ರಗತಿಯಲ್ಲಿವೆ. 3 ಕಾಮಗಾರಿಗಳು ಆರಂಭಿಸಬೇಕಿದೆ ಎಂದರು.
ಜೆಸ್ಕಾ ಇಲಾಖೆ ವಿಭಾಗೀಯ ಅಧಿಕಾರಿ ರಾಜಶೇಖರ, ಕೃಷಿ ಸಹಾಯ ನಿರ್ದೇಶಕ ರಾಮನಗೌಡ ಪಾಟೀಲ್, ಬಿಇಓ ಯಲ್ಲಪ್ಪ ಕಾಡ್ಲೂರ ಮಾತನಾಡಿದರು.
ವೇದಿಕೆಯಲ್ಲಿ ತಹಶೀಲ್ದಾರ್ ಹುಸೇನಸಾಬ್ ಸರಕಾವಸ್, ತಾಲೂಕು ಪಂಚಾಯತ್ ಇಒ ಬಸವರಾಜ ಸಜ್ಜನ್, ಹುಣಸಗಿ ತಾಲೂಕು ಪಂಚಾಯತ್ ಇಓ ಬಸ್ಸಣ್ಣ ನಾಯಕ ಉಪಸ್ಥಿತರಿದ್ದರು.
ಸಭೆಯಲ್ಲಿ ಹೊರ ಜಿಲ್ಲೆಗಳಿಗೆ ಹೋಗುವ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಣೆ ಹಾಗೂ ಆರೋಗ್ಯ ಇಲಾಖೆಯ ಸಾಂಕ್ರಾಮಿಕ ರೋಗಗಳು ಹರಡದಂತೆ ಜಾಗೃತಿ ವಹಿಸುವ ಭಿತ್ತಿ ಪತ್ರ, ಕೃಷಿ ಇಲಾಖೆಯ ಗೊಬ್ಬರ ಬಳಕೆಯ ಕುರಿತು ಜಾಗೃತಿ ಮೂಡಿಸುವ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಮಧ್ಯಾಹ್ನದವರೆಗೆ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ 16 ಇಲಾಖೆಗಳ ಪ್ರಗತಿ ಪರಿಶೀಲನೆ ಮಾತ್ರ ನಡೆಸಲಾಯಿತು. ಪ್ರಮುಖ ಮಹಿಳಾ ಮತ್ತು ಮಕ್ಕಳ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ತೋಟಗಾರಿಕೆ ಇಲಾಖೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಮೀನುಗಾರಿಕೆ ಇಲಾಖೆ, ನಗರಸಭೆ, ಕೈಗಾರಿಕೆ, ರೇಷ್ಮೆ ಇಲಾಖೆ ಸೇರಿ ಇನ್ನೂ ಅನೇಕ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸುವ ಮುನ್ನವೆ ಸಭೆಯನ್ನು ಸಮಾಪ್ರತಿಗೊಳಿಸಲಾಯಿತು.