ಯಾದಗಿರಿ | ಅಂಬಿಗರ ಚೌಡಯ್ಯ ಮೂರ್ತಿ ವಿರೂಪ ಖಂಡಿಸಿ ಪ್ರತಿಭಟನೆ
ಯಾದಗಿರಿ : ಕಲಬುರ್ಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ಕಿಡಿಗೇಡಿಗಳು ಅಂಬಿಗರ ಚೌಡಯ್ಯನವರ ಮೂರ್ತಿ ಭಗ್ನಗೊಳಿಸಿರುವ ಘಟನೆ ಖಂಡಿಸಿ ನಗರದ ತಹಸಿಲ್ದಾರ್ ಕಚೇರಿ ಮುಂದೆ ಅಖಿಲ ಕರ್ನಾಟಕ ಟೋಕ್ರೆ ಕೊಲಿ, ಕಬ್ಬಲಿಗ, ಬೆಸ್ತ, ಅಂಬಿಗ, ಬುಡಕಟ್ಟು ಹೋರಾಟ ಸಮಿತಿ ಮುಖಂಡರು ಪ್ರತಿಭಟನೆ ನಡೆಸಿದರು.
ಮುತ್ತಗಾ ಗ್ರಾಮದಲ್ಲಿ ಅಂಬಿಗರ ಚೌಡಯ್ಯನವರ ಮೂರ್ತಿ ಇದೇ ವರ್ಷ ಸ್ಥಾಪನೆಯಾಗಿದೆ. ಆದರೆ ಯಾರೋ ಕೈಲಾಗದ ಹೇಡಿಗಳು ಮೂರ್ತಿ ವಿರೂಪ ಮಾಡುವ ಮೂಲಕ ಹೇಡಿತನ ಪ್ರದರ್ಶಿಸಿದ್ದಾರೆ. ನಿಜವಾದ ತಾಕತ್ತು ಇದ್ದರೆ ನಾನೇ ಮೂರ್ತಿ ವಿರೂಪ ಮಾಡಿದ್ದೇನೆ ಎಂದು ಮುಂದೆ ಬರಲಿ. ಆಗ ನಮ್ಮ ತಾಕತ್ತು ಏನು ಎಂದು ತೋರಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆರೋಪಿಗಳನ್ನು ಕೂಡಲೇ ಬಂಧಿಸದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ದೇವಿಂದ್ರಪ್ಪಗೌಡ ಮಾಲಿ ಪಾಟೀಲ್ ದೇವರಗೋನಾಲ, ಪಾರಪ್ಪ ಎಲ್. ಗುತ್ತೇದಾರ, ವೆಂಕಟರೆಡ್ಡಿ ಭೋಯಿಗಲ್ಲಿ, ಮಲ್ಲು ವಿಷ್ಣುಸೇನಾ,ಪ್ರಶಾಂತ ಜೈನಾಪುರ, ಸಂತೋಷ ದೇವಾಪುರ, ಶಿವಣ್ಣ ಕಟ್ಟಿಮನಿ, ರಂಗನಗೌಡ ಪಾಟೀಲ್ ದೇವಿಕೇರಾ,ಹೊನ್ನಪ್ಪ ತಳವಾರ,ಎನ್.ಜೆ.ಬಾಕ್ಲಿ,ಯಂಕಣ್ಣ ಕಟ್ಟಿಮನಿ,ಎಸ್.ಡಿ.ಬಾಕ್ಲಿ,ಯಲ್ಲಪ್ಪ ರತ್ತಾಳ, ಯಂಕಣ್ಣ ಕಟ್ಟಿಮನಿ, ಶರಣು ಸಾಹುಕಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.