ಯಾದಗಿರಿ | ಹೊನಗೇರಾ ರಸ್ತೆಯಲ್ಲಿನ ಗುಂಡಿಗಳನ್ನು ದುರಸ್ತಿಪಡಿಸದಿದ್ದರೆ ಹೋರಾಟ: ವಿಶ್ವರಾಜ ಪಾಟೀಲ್
ಯಾದಗಿರಿ | ಹೊನಗೇರಾ ರಸ್ತೆಯಲ್ಲಿನ ಗುಂಡಿಗಳನ್ನು ಸರಿಪಡಿಸದಿದ್ದರೆ ಹೋರಾಟ: ವಿಶ್ವರಾಜ ಪಾಟೀಲ್
ಯಾದಗಿರಿ: ತಾಲ್ಲೂಕಿನ ಹೊನಗೇರಾ ಗ್ರಾಮದೊಳಗಿನ ರಸ್ತೆಗಳು ತಗ್ಗು ಗುಂಡಿಗಳಿಂದ ಕೂಡಿದ್ದು, ಸಂಚಾರ ನರಕ ಸದೃಶ್ಯವಾಗಿದೆ. ಗ್ರಾಮ ಪಂಚಾಯತ್ ಅಧಿಕಾರಿಗಳು ಮತ್ತು ಪ್ರತಿನಿಧಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಕರವೇ ವಿದ್ಯಾರ್ಥಿ ಘಟಕದ ಅಧ್ಯಕ್ಷ ವಿಶ್ವರಾಜ ಪಾಟೀಲ್, ಸುಮಾರು ವರ್ಷಗಳಿಂದ ಗ್ರಾಮದ ಎಲ್ಲ ಬೀದಿ, ಒಳ ರಸ್ತೆಗಳು ಅಧ್ವಾನವಾಗಿದ್ದು, ಸಂಚಾರ ನರಕ ದರ್ಶನ ಮಾಡಿಸುತ್ತಿದೆ ಎಂದು ಅವರು ದೂರಿದ್ದಾರೆ.
ಗ್ರಾಮ ಪಂಚಾಯತ್ ಸುತ್ತಮುತ್ತಲ ಆವರಣದಲ್ಲಿ ಕಸದ ಕೊಂಪೆಯೇ ಬಿದ್ದಿದ್ದರೂ ಕ್ಯಾರೆ ಎನ್ನುತ್ತಿಲ್ಲ. ಅಲ್ಲದೇ ಗ್ರಾಪಂ ಮುಂದೆಯೇ ಇರುವ ಹಳೆಯ ಬಾವಿಯಲ್ಲಿ ಮಲೀನ ನೀರು ತುಂಬಿಕೊಂಡು ವರ್ಷಗಳೇ ಕಳೆದಿದ್ದರೂ ಅದನ್ನು ಮುಚ್ಚುವ ಕೆಲಸವನ್ನೂ ಸಹ ಮಾಡದೇ, ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಕುರಿತು ಹಲವು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ತಕ್ಷಣ ಕ್ರಮ ಕೈಗೊಂಡು ಜನತೆಗೆ ಆಗುತ್ತಿರುವ ಸಂಕಷ್ಟ ಪರಿಹರಿಸಬೇಕು. ಇಲ್ಲದಿದ್ದರೆ ಕರವೇಯಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.