ಯಾದಗಿರಿ | ಪರಿಶಿಷ್ಟ ಜನಾಂಗಕ್ಕೆ ಸೇರಿದ ಕುಡಿಯುವ ನೀರಿನ ಬಾವಿ ಮುಚ್ಚಿದ ಸವರ್ಣೀಯರು : ಆರೋಪ
ಯಾದಗಿರಿ, ಆ.19: ಜಿಲ್ಲೆಯ ವಡಗೇರಾ ತಾಲೂಕಿನ ಗೋನಾಲ ಪಂಚಾಯತ್ ವ್ಯಾಪ್ತಿಯ ಕೊಂಗಂಡಿ ಗ್ರಾಮದ ಸಿಮಾಂತರದಲ್ಲಿ ಬರುವ ಸರ್ವೇ ನಂ: 12/6- 03 ಗುಂಟೆ ಜಮೀನಿನಲ್ಲಿರುವ ಸರಕಾರಿ ಬಾವಿಯು ಎಸ್.ಟಿ, ಎಸ್.ಸಿ ಜನಾಂಗಕ್ಕೆ ಸೇರಿದ್ದು, ತಿಮ್ಮಣ್ಣ ಮತ್ತು ಮರಲಿಂಗ ಎಂಬವರಿಬ್ಬರು ಕೂಡಿಕೊಂಡು ಬಾವಿಯ ಜಾಗ ನಮ್ಮದೆಂದು ದೌರ್ಜನ್ಯ ಮಾಡಿ ಜೆಸಿಬಿಯಿಂದ ಮುಚ್ಚಿದ್ದಾರೆ ಎಂದು ಎಸ್‌ಸಿ, ಎಸ್‌ಟಿ ಸಮುದಾಯದ ನಿಂಗಪ್ಪ, ಚಂದ್ರಪ್ಪ ,ಲಚಮಣ್ಣ ಎಂಬವರು ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಕೋರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಕುಡಿಯುವ ನೀರಿನ ಬಾವಿ ಮುಚ್ಚಿಸಿದ್ದನ್ನು ಪ್ರಶ್ನಿಸಿದರೆ ಈ ಬಾವಿ ನನ್ನ ಜಮೀನಿನಲ್ಲಿ ಬರುತ್ತದೆ ಎಂದು ನಮ್ಮ ಮೇಲೆ ದೌರ್ಜನ್ಯದಿಂದ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸರಕಾರಿ ಬಾವಿಯನ್ನು ಒತ್ತುವರಿ ಮಾಡಿಕೊಂಡು ನಮ್ಮ ಮೇಲೆ ಹಲ್ಲೆ ಮಾಡಿರುವ ತಿಮ್ಮಣ್ಣ ಮತ್ತು ಮರಲಿಂಗ ವಿರುದ್ಧ ಸೂಕ್ತ ಕ್ರಮ ಜರಗಿಸಿ ನಮಗೆ ಸಾರ್ವಜನಿಕ ಬಾವಿಯನ್ನು ಮರಳಿಸಿ ನೀರಿನ ಸೌಲಭ್ಯವನ್ನು ಒದಗಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.