ಯಾದಗಿರಿ | ದೇವಾಪುರದ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು
ಯಾದಗಿರಿ : ಸುರಪುರ ತಾಲೂಕಿನ ದೇವಾಪುರ ಗ್ರಾಮದ ಬಾಲಕಿಯರ ವಸತಿ ನಿಲಯದಲ್ಲಿನ 10 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿರುವ ಘಟನೆ ನಡೆದಿರುವುದು ವರದಿಯಾಗಿದೆ.
ಸೋಮವಾರ ಬೆಳಗ್ಗೆ ವಸತಿ ನಿಲಯದಲ್ಲಿದ್ದ 40 ವಿದ್ಯಾರ್ಥಿನಿಯರು ಉಪಹಾರ ಸೇವಿಸಿದ ಕೆಲ ಸಮಯದ ನಂತರ 10 ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ.
ಅಸ್ವಸ್ಥರಾದ ವಿದ್ಯಾರ್ಥಿನಿಯರನ್ನು ಸುರಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ವಿಷಯ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ಟಿಎಚ್‌ಒ ಡಾ.ಆರ್.ವಿ.ನಾಯಕ ಮಾತನಾಡಿ, ಎಲ್ಲ ಮಕ್ಕಳಿಗೂ ಚಿಕಿತ್ಸೆ ನೀಡಲಾಗಿದ್ದು, ಗುಣಮುಖರಾಗಿದ್ದಾರೆ. ಸಂಜೆ ಎಲ್ಲರನ್ನು ವಸತಿ ನಿಲಯಕ್ಕೆ ಕಳುಹಿಸಿಕೊಡಲಾಗಿದೆ. ಬಾಲಕಿಯರು ಅಸ್ವಸ್ಥರಾಗಲು ಏನು ಕಾರಣ ಎನ್ನುವುದನ್ನು ಪತ್ತೆ ಮಾಡಲು ಆಹಾರವನ್ನು ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ ಎಂದು ತಿಳಿಸಿದ್ದಾರೆ.
ಈ ವೇಳೆ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ತಿಪ್ಪಾರಡ್ಡಿ ಮಾಲಿಪಾಟೀಲ್, ಮತ್ತಿತರರಿದ್ದರು.