ಯಾದಗಿರಿ | ಸ್ವಹಿತಕ್ಕಾಗಿ ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದ್ದರು : ಛಲವಾದಿ ನಾರಾಯಣಸ್ವಾಮಿ ಆರೋಪ
ಯಾದಗಿರಿ: ತುರ್ತು ಪರಿಸ್ಥಿತಿಯು ದೇಶಕ್ಕೆ ಅಂಟಿದ ಕಪ್ಪುಚುಕ್ಕೆ. ತಮ್ಮ ಸ್ವಾರ್ಥಕ್ಕಾಗಿ ದೇಶದಲ್ಲಿ ಇಂತಹ ಸ್ಥಿತಿ ನಿರ್ಮಾಣಕ್ಕೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರೇ ಕಾರಣ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಾಣಸ್ವಾಮಿ ಆರೋಪಿಸಿದರು.
ನಗರದ ಲಿಂಗೇರಿ ಕೊನಪ್ಪ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ತುರ್ತು ಪರಸ್ಥಿತಿ ಕರಾಳ ಪರಸ್ಥಿತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, 1974-75ರಲ್ಲಿ ಪ್ರಧಾನಿಯಾಗಿದ್ದ ಸಮಯದಲ್ಲಿ ಇವರ ಚುನಾವಣೆ ಆಯ್ಕೆ ವಿರೋಧಿಸಿ ರಾಜನಾರಾಯಣ ಎಂಬುವವರು ಹೈಕೋರ್ಟ್‌ನಲ್ಲಿ ದಾವೆ ಹೂಡಿದಾಗ 24 ದಿನಗಳ ಸಮಯದಲ್ಲಿ ಜಗತ್ತೇ ಕೇಳರಿಯದ ಮತ್ತು ಕಾಣದಂತಹ ತುರ್ತು ಪರಿಸ್ಥಿತಿ ಈ ದೇಶದಲ್ಲಿ ಹೇರುವ ಮೂಲಕ ತಮ್ಮ ಅಧಿಕಾರ ಉಳಿಸಿಕೊಂಡ ಅಪಕೀರ್ತಿ ಇಂದಿರಾಗಾಂಧಿ ಅವರಿಗೆ ಸಲ್ಲಬೇಕೆಂದು ಛಲವಾದಿ ವಿವರಿಸಿದರು.
ಇದನ್ನು ವಿರೋಧಿಸಿದ ಸಾವಿರಾರು ಜನರನ್ನು ಎಲ್ಲೆಂದರಲ್ಲಿ ಜೈಲಿಗೆ ಹಾಕಿದರು. ಸಂವಿಧಾನವೇ ಮುಚ್ಚಿ ಇಟ್ಟರು. ಪತ್ರಿಕಾ ಸ್ವಾತಂತ್ರ್ಯವೇ ಕಸಿದುಕೊಂಡರು. ಸಂವಿಧಾನವನ್ನು ತಮಗೆ ಬೇಕಾದ ಹಾಗೇ ತಿದಿದ್ದರು. ಹೀಗೆ ಇದೊಂದು ಕರಾಳ ಸ್ಥಿತಿ ದೇಶಕ್ಕೆ ನೀಡದ ಕೀರ್ತಿಯೂ ಇಂದಿರಾಗಾಂಧಿ ಅವರಿಗೆ ಸಲ್ಲುತ್ತದೆ ಎಂದು ಅವರು ಆರೋಪಿಸಿದರು.
ಈ ಕರಾಳ ಇತಿಹಾಸವು ಇಂದಿನ ಪೀಳಿಗೆಗೆ ತಿಳಿಯುವ ನಿಟ್ಟಿನಲ್ಲಿ ನಾವು ದೇಶದ ಎಲ್ಲಡೆ ಇಂತಹ ಕಾರ್ಯಕ್ರಮ ಆಯೋಜಿಸುತ್ತಿದ್ದೆವೆ ಎಂದು ನಾರಾಯಣಸ್ವಾಮಿ ಹೇಳಿದರು.
ಸಂಸ್ಥೆ ಕಾರ್ಯದರ್ಶಿ ಸಿದ್ರಾಮಪ್ಪ ಗೌಡ ಚೇಗಂಟಾ, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ, ಮಾಜಿ ಅಧ್ಯಕ್ಷ ಅಮೀನರಡ್ಡಿ ಯಾಳಗಿ, ಯುವ ಮುಖಂಡ ಮಹೇಶರಡ್ಡಿ ಮುದ್ನಾಳ, ಕಾಲೇಜಿನ ಪ್ರಾಂಶುಪಾಲ ಗುರಪ್ಪಚಾರ್ಯ ವಿಶ್ವಕರ್ಮ, ಸಿಬ್ಬಂದಿಗಳು ಸವಿತಾ, ಅನನ್ಯಾ,ಬಸವರಾಜ ಜುಗೇರಿ, ಸತೀಶಕುಮಾರ, ರಮಾ ಕುಲಕರ್ಣಿ ಸೇರಿದಂತೆಯೇ ಇತರರಿದ್ದರು.
ಕಳೆದ 11 ವರ್ಷಗಳಿಂದ ದೇಶದಲ್ಲಿ ಅಘೋಷಿತ ತುರ್ತು ಪರಸ್ಥಿತಿ ಇದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದನ್ನು ಗಮನಿಸಿದರೇ ಅಂದು ನಿಜವಾದ ತುರ್ತು ಪರಸ್ಥಿತಿ ಇತ್ತು ಎಂಬುವುದು ಒಪ್ಪಿಕೊಂಡಂತೆಯೇ ಆಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು. ಈ ಹೇಳಿಕೆ ನೀಡುವ ಬದಲಿಗೆ ಅಂದು ಇಂದಿರಾ ಗಾಂಧಿ ಅವರು ಮಾಡಿದ ತಪ್ಪಿಗೆ ದೇಶದ ಜನತೆಗೆ ಕ್ಷಮೆ ಕೇಳಿದ್ದರೇ ಅವರು ಬಹುದೊಡ್ಡ ವ್ಯಕ್ತಿಯಾಗುತ್ತಿದ್ದರು ಎಂದು ಅವರು ಹೇಳಿದರು.