ಯಾದಗಿರಿ | ನಮ್ಮ ಕರುನಾಡ ರಕ್ಷಣಾ ವೇದಿಕೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ
ಯಾದಗಿರಿ: ಸುರಪುರ ತಾಲೂಕು ದಂಡ ಸೋಲಾಪುರ ತಾಂಡಾದ ಮೋನಾಬಾಯಿ ಪುನಿಮ್ ಚಂದ್ ಎಂಬ ಮಹಿಳೆಯ ಸಾವಿಗೆ ಕಾರಣರಾದ ಮತ್ತು ಈ ಸಾವನ್ನು ಆತ್ಮಹತ್ಯೆ ಎಂದು ಬಿಂಬಿಸಿ ಸರ್ಕಾರಕ್ಕೆ ವಂಚಿಸಿ 5 ಲಕ್ಷ ರೂ. ಪರಿಹಾರ ನೀಡಿದ ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿ, ಗ್ರಾಮ ಸಹಾಯಕ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಆ ಅವಧಿಯಲ್ಲಿದ್ದ ಪಿ.ಎಸ್.ಐ. ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ನಮ್ಮ ಕರುನಾಡ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಒತ್ತಾಯಿಸಲಾಯಿತು.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ವೇದಿಕೆ ಮುಖಂಡರು, ಈಗಾಗಲೇ ವಂಚನೆ ಮಾಡಿದ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದು, ಮತ್ತೊಂದು ಎಫ್.ಐಆರ್ ಹಾಕಿದ್ದಾರೆ. ಇದರಲ್ಲಿ 1)ಸಂತೋಷ ತಂ/ ಸೋಮ್ಲಾ, 2) ಅತ್ತಿಗೆ ಶಿಲಾಬಾಯಿ ಗಂ/ ಸಂತೋಷ, 3)ಠಾಕೂರ ತಂ/ ಶಂಕರ, 4)ಪದ್ಮಾಬಾಯಿ ಗಂ/ ಠಾಕೂರ, 5) ಗೇನುಸಿಂಗ್ ತಂ/ ಪುನಿಮ್ ಚಂದ್ 6)ಸರಸ್ವತಿ ಗಂ/ ಗೇನುಸಿಂಗ್ ಇವರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಯಾವುದೇ ಪರಿಶೀಲನೆ ಮಾಡದೇ ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಸಹಾಯಕ, ಕಂದಾಯ ಅಧಿಕಾರಿಗಳು, ಆ ಅವಧಿಯಲ್ಲಿದ್ದ ಪಿ.ಎಸ್.ಐ. ರವರು ಶಾಮೀಲಾಗಿ ರೂ. 5 ಲಕ್ಷ ಪರಿಹಾರ ನೀಡಿ ಅವ್ಯವಹಾರ ಎಸಗಿದ್ದಾರೆ ಎಂದು ದೂರಿದರು.
ಸರಕಾರಕ್ಕೆ ಮೋಸ-ವಂಚನೆ ಮಾಡಿರುವ ಸದರಿ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ, ಕ್ರಿಮಿನಲ್ ಪ್ರಕರಣ ದಾಖಲಿಸಿ, ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕೆಂದು ಮನವಿ ಸಲ್ಲಿಸಿದರು.
ಜಿಲ್ಲಾದ್ಯಕ್ಷ ರವಿ.ಕೆ.ಮುದ್ನಾಳ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಶಂಕರಗೌಡ ಯಲಸತ್ತಿ, ಗುರುಮಠಕಲ್ ತಾಲ್ಲೂಕು ಅಧ್ಯಕ್ಷ ಅಶೋಕರಡ್ಡಿ ವಂಕಸಂಬರ, ಯಾದಗಿರಿ ತಾಲ್ಲೂಕು ಅಧ್ಯಕ್ಷ ವೆಂಕಟೇಶ.ಎಸ್.ಚವ್ಹಾಣ, ಗೋವಿಂದ.ಟಿ.ರಾಠೋಡ, ರೋಹಿತ ರಾಠೋಡ ಸೇರಿದಂತೆ ಇನ್ನಿತರರು ಇದ್ದರು.