ಯಾದಗಿರಿ | ಶಾಂತಿಯಿಂದ ಬಕ್ರೀದ್ ಹಬ್ಬ ಆಚರಿಸಿ : ಜಿಲ್ಲಾಧಿಕಾರಿ ಸುಶೀಲಾ ಬಿ.
ಯಾದಗಿರಿ: ಯಾವುದೇ ಧರ್ಮದ ಹಬ್ಬವು ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡಬೇಕು. ಈ ದಿಸೆಯಲ್ಲಿ ಮುಸ್ಲಿಂ ಹಾಗೂ ಹಿಂದು ಬಾಂಧವರು ಒಗ್ಗಟ್ಟಾಗಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಶಾಂತಿಯಿಂದ ಬಕ್ರೀದ್ ಹಬ್ಬವನ್ನು ಆಚರಣೆ ಮಾಡಬೇಕೆಂದು ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ಹೇಳಿದರು.
ಯಾದಗಿರಿ ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜೂ.6ರ ಶುಕ್ರವಾರದಂದು ಬಕ್ರೀದ್ ಹಬ್ಬದ ಪ್ರಯುಕ್ತ ಹಿಂದು ಹಾಗೂ ಮುಸ್ಲಿಂ ಸಮುದಾಯಗಳ ಮುಖಂಡರ ಸೌಹಾರ್ದ ಸಭೆ ನಡೆಸಿ ಅವರು ಮಾತನಾಡಿದರು.
ತ್ಯಾಗ ಸೌಹಾರ್ದದ ಸಂಕೇತದ ಹಬ್ಬ ಬಕ್ರೀದ್ ಆಗಿದ್ದು, ಪ್ರೀತಿ ಸಹೋದರತ್ವ ಸಾರಲು ಈ ಹಬ್ಬ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಗೋವುಗಳ ಅಕ್ರಮ ಸಾಗಾಟ ಕಂಡುಬಂದರೆ ಪೊಲೀಸ್ ಗಮನಕ್ಕೆ ತರಬೇಕು. ಗೋಹತ್ಯೆ ಕಾಯ್ದೆ ಉಲ್ಲಂಘನೆ ಮಾಡಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಸಾಮಾಜಿಕ ಜಾಲತಾಣದ ಮೇಲೆ ನಿಗಾ ಇಡಲಾಗಿದ್ದು, ಪ್ರಚೋದನಕಾರಿ ಪೋಸ್ಟರ್‌ಗಳು, ದ್ವೇಷ ಭಾಷಣ ಮಾಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಸಹಾಯಕ ಆಯುಕ್ತರು ಹಂಪಣ್ಣ ಸಜ್ಜನ್, ಯಾದಗಿರಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕರು ರಾಜುದೇಶಮುಖ, ಶಹಾಪೂರ ತಹಸೀಲ್ದಾರ ಉಮಾಕಾಂತ ಹಳ್ಳಿ, ವಡಗೇರಾ ತಹಸೀಲ್ದಾರ ಮಂಗಳಾ.ಎಮ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಮುಖಂಡರುಗಳು ವಿಶ್ವನಾಥ ಸಿರವಾರ, ಶರಣಪ್ಪ ಗೊಳಗಿ, ಜಹಿರೇದ್ದಿನ ಸವೇರಾ, ಜಿವಾನಿಸಾಬ ಆಫಗಾನಿ, ಅಬ್ದುಲ ಕರೀಮ್, ಭೀಮಣ್ಣ ಹೊಸಮನಿ, ಇನ್ನಿತರರು ಉಪಸ್ಥಿತರಿದ್ದರು.