ಯಾದಗಿರಿ | ಪೊಲೀಸ್ ಇಲಾಖೆಯ ವತಿಯಿಂದ ಮಕ್ಕಳ ಹಕ್ಕುಗಳ ಜಾಗೃತಿ ಅಭಿಯಾನ
ಸುರಪುರ: ತಾಲೂಕಿನ ಜಾಲಿಬೆಂಚಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪೇಠ ಅಮ್ಮಾಪುರ ಗ್ರಾಮದ ಸಗರನಾಡು ಪ್ರೌಢಶಾಲೆ ಆವರಣದಲ್ಲಿ ಶಾಲಾ ಮಕ್ಕಳಿಗೆ ಮಕ್ಕಳ ಹಕ್ಕುಗಳಾದ ಬದುಕುವ ಹಕ್ಕು, ರಕ್ಷಣೆ ಹೊಂದುವ ಹಕ್ಕು,ವಿಕಾಸ ಹೊಂದುವ ಹಕ್ಕು ಹಾಗೂ ಭಾಗವಹಿಸುವ ಹಕ್ಕುಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪಿಎಸ್ಐ ಶರಣಪ್ಪ ಹವಾಲ್ದಾರ್ ಮಾತನಾಡಿ,ಬಾಲ್ಯ ವಿವಾಹ ನಿಷೇಧ ಕಾಯ್ದೆ 2006 ತಿದ್ದುಪಡಿ ಕಾಯ್ದೆ 2016 ರ ಬಾಲ್ಯ ವಿವಾಹವು ಶಿಕ್ಷಾರ್ಹ ಅಪರಾಧವಾಗಿದ್ದು, 21 ವರ್ಷದೊಳಗಿನ ಹುಡುಗ ಹಾಗೂ 18 ವರ್ಷದೊಳಗಿನ ಹುಡುಗಿಯರ ನಡುವೆ ಮದುವೆಯನ್ನು ಬಾಲ್ಯ ವಿವಾಹವೆಂದು ಪರಿಗಣಿಸಲಾಗುವುದು ಎಂದರು.
ಗಿರಿನಾಡು ಮಹಿಳಾ ಪೊಲೀಸ್ ಪಡೆಯ ಕಾವ್ಯ ಗೆಜ್ಜೆ ಮಾತನಾಡಿ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ pocso act 2012 ಕುರಿತು ಯಾವುದೇ ಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ನೋಡುವುದಾಗಲಿ, ಸ್ಪರ್ಶಿಸುವುದಾಗಲಿ, ಹಿಂಬಾಲಿಸುವುದಾಗಲಿ ಕಂಡು ಬಂದರೆ ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಎಎಸ್‌ಐ ಮನೋಹರ್ ರಾಥೋಡ್ ಮಾತನಾಡಿ, ತಮ್ಮ ವೈಯಕ್ತಿಕ ಮಾಹಿತಿಗಳಾಗಲಿ, ಆಧಾರ್ ನಂಬರ್, ಬ್ಯಾಂಕ್ ಅಕೌಂಟ್ ನಂಬರ್, ಓಟಿಪಿ ಅಪರಿಚಿತರೊಂದಿಗೆ ಹಂಚಿಕೊಳ್ಳಬೇಡಿ, ಸೈಬರ್ ಅಪರಾಧಗಳು ಕಂಡು ಬಂದಲ್ಲಿ 1930 ದೂರು ದಾಖಲಿಸುವಂತೆ ಸಲಹೆ ನೀಡಿದರು.
ಪೊಲೀಸ್ ಪೇದೆ ದಯಾನಂದ ಜಾಮಾದಾರ್ ಮಾತನಾಡಿದರು.
ಈ ಸಂದರ್ಭದಲ್ಲಿ ಜಾಲಿಬೆಂಚಿ ಗ್ರಾಮದ ಮುಖಂಡರಾದ ಕಾಳಪ್ಪ ಕವಾತಿ,ಪೇಠ ಅಮ್ಮಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಸವರಾಜ್ ಹಾಗೂ ಶಾಲೆಯ ಮುಖ್ಯ ಶಿಕ್ಷಕಿ ಪರ್ವೀನ್,ಶಿಕ್ಷಕ ವೃಂದ ಹಾಗೂ ನೂರಾರು ಮಕ್ಕಳು ಹಾಗೂ ಪೇಠ ಅಮ್ಮಾಪುರ ಸಗರನಾಡು ಪ್ರೌಢ ಶಾಲೆ ಮುಖ್ಯ ಗುರು ಈರಣ್ಣ ಹಾಗೂ ಸಹ ಶಿಕ್ಷಕ ವೃಂದದವರು ನೂರಾರು ಶಾಲಾ ಮಕ್ಕಳು ಭಾಗವಹಿಸಿದ್ದರು.