ಯಾದಗಿರಿ | ಮಲ್ಲಮ್ಮದೇವಿ ಮಹರ್ಷಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಶಾಸಕರಿಂದ ಚಾಲನೆ
ಸುರಪುರ: ನಗರದ ಮೇದಾಗಲ್ಲಿಯಲ್ಲಿ 2022-23ನೇ ಸಾಲಿನ ಅಮೃತ ನಗರೋತ್ಥಾನ ಯೋಜನೆ ಅಡಿ 85 ಲಕ್ಷ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಮಲ್ಲಮ್ಮದೇವಿ ದೇವಸ್ಥಾನ ಭವನ ಹಾಗೂ ಮಹರ್ಷಿ ವಾಲ್ಮೀಕಿ ಭವನ ನಿರ್ಮಾಣ ಕಾಮಗಾರಿಗಳಿಗೆ ಮಂಗಳವಾರದಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ನಗರಸಭೆ ವ್ಯಾಪ್ತಿಯಲ್ಲಿ ಕೆಕೆ ಆರ್‌ಡಿಬಿ ಅನುದಾನ ಅಡಿ ವೆಂಕಟಾಪುರ ರಸ್ತೆ, ಬೋಯಿಗಲ್ಲಿ, ಟೇಲರ್ ಮಂಜಿಲ್ ರಸ್ತೆ ಸೇರಿದಂತೆ ವಿವಿಧ ವಾರ್ಡುಗಳಲ್ಲಿ ಸಿಸಿ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದ್ದು, ನಗರದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಪ್ರಾಶಸ್ತ್ಯ ನೀಡಲಾಗುವುದು ಎಂದು ತಿಳಿಸಿದ ಅವರು, ಮೇದಾಗಲ್ಲಿ ವಾರ್ಡುನಲ್ಲಿ ಭವನಗಳ ನಿರ್ಮಾಣದಿಂದ ವಾರ್ಡಿನ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಲಿದ್ದು, ಅಧಿಕಾರಿಗಳು ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ನಗರಸಭೆ ಉಪಾಧ್ಯಕ್ಷ ರಾಜಾ ಪಿಡ್ಡನಾಯಕ(ತಾತಾ), ಯೂಥ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ, ಪ್ರಭಾರಿ ನಗರಸಭೆ ಪೌರಾಯುಕ್ತ ಶಾಂತಪ್ಪ ಹೊಸೂರ, ಪ್ರಮುಖರಾದ ಚಿರಂಜೀವಿ ನಾಯಕ, ಶಕೀಲ್ ಅಹ್ಮದ್, ಬಸವರಾಜ ಕೊಡೇಕಲ್, ಶರಣಗೌಡ, ಭೀಮಣ್ಣ ಸಿನ್ನೂರ, ಅಹ್ಮದ್ ಪಠಾಣ್, ಈರಪ್ಪ, ವೆಂಕಟೇಶ ಕುದರಿಮನಿ, ನಾಗರಾಜ ಚವಲ್ಕರ್, ರಾಮು ಕಟ್ಟಿಮನಿ, ಪರಶುರಾಮ ಗುತ್ತೇದಾರ, ಚಂದ್ರಾಮ, ಪರಶುರಾಮ ಗೌಂಡಿ ಇತರರಿದ್ದರು.