ಯಾದಗಿರಿ | ಕೆಂಭಾವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಇಂದಿರಾ ಕ್ಯಾಂಟಿನ್ ಉದ್ಘಾಟನೆ
ಯಾದಗಿರಿ: ಕೆಂಭಾವಿ ಪಟ್ಟಣದ ಹೊಸ ಬಸ್ ನಿಲ್ದಾಣದ ಆವರಣದಲ್ಲಿ 82 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಇಂದಿರಾ ಕ್ಯಾಂಟಿನ್ ಶುಕ್ರವಾರ ಜಿಲ್ಲಾ ಉಸ್ತುವಾರಿ, ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಇಂದಿನ ದುಬಾರಿ ಕಾಲಮಾನದಲ್ಲಿ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯ ಕೊಡುಗೆಯಾದ ಇಂದಿರಾ ಕ್ಯಾಂಟೀನ್ ಬಹು ಜನರಿಗೆ ವರದಾನವಾಗಿದೆ. ಬಡವರು ಕೂಲಿಕಾರ್ಮಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅತೀ ಕಡಿಮೆ ದರದಲ್ಲಿ ಹಸಿವು ನೀಗಿಸುವ ಮಹದುದ್ದೇಶದಿಂದ ಇಂದಿರಾ ಕ್ಯಾಂಟಿನ್ ಅಸ್ತಿತ್ವಕ್ಕೆ ತರಲಾಗಿದ್ದು. ಕ್ಯಾಂಟೀನ್‌ನಲ್ಲಿ ಉತ್ತಮ ಗುಣಮಟ್ಟದ, ಶುಚಿ, ರುಚಿಯಾದ ಆಹಾರ ದೊರೆಯುತ್ತದೆ. ಜನತೆಯೂ ಕೂಡ ಇದರ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಬಸರಡ್ಡಿ ಅನುಪುರ್, ಶಿವಮಾಂತ ಚಂದಾಪುರ, ಬ್ಲಾಕ್ ಅಧ್ಯಕ್ಷ ಬಸನಗೌಡ ಹೊಸಮನಿ, ಜಿಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪೊ. ಪಾಟೀಲ್, ಶರಣಪ್ಪ ಸಲದಪುರ, ವಾಮನರಾವ್ ದೇಶಪಾಂಡೆ, ಬಸವರಾಜ್ ಚಿಂಚೋಳಿ, ಪುರಸಭೆ ಅಧ್ಯಕ್ಷ ರಹೇಮಾನಪಟೇಲ್ ಯಲಗೋಡ, ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಕಂಬಾರ, ಆಶ್ರಯ ಸಮಿತಿ ಅಧ್ಯಕ್ಷ ಶರಣಬಸ್ಸು ಡಿಗ್ಗಾವಿ, ಮುದಿಗೌಡ ಮಾಲಿ ಪಾಟೀಲ್, ಬಾಪುಗೌಡ ಪಾಟೀಲ್, ಮುಖ್ಯಾಧಿಕಾರಿ ಮಹ್ಮದ ಯೂಸೂಫ್, ಪುರಸಭೆ ಸದಸ್ಯರು, ಆಶ್ರಯ ಸಮಿತಿ ಸದಸ್ಯರು, ಪುರಸಭೆ ಸಿಬ್ಬಂದಿ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.