×
Ad

ಯಾದಗಿರಿ | ಸಣ್ಣ, ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಿ ಆರ್ಥಿಕವಾಗಿ ಸಬಲರಾಗಿ: ಜಿಪಂ ಸಿಇಓ ಲವೀಶ್ ಓರಡಿಯಾ

Update: 2025-07-31 19:01 IST

ಯಾದಗಿರಿ: ಸ್ವಸಹಾಯ ಗುಂಪುಗಳಿಂದ ಸಣ್ಣ,ಸಣ್ಣ ಉದ್ಯಮಗಳನ್ನು ಮನೆಯಲ್ಲಿಯೇ ಮಾಡುವ‌ ಮೂಲಕ ಆರ್ಥಿಕವಾಗಿ ಸಬಲರಾಗುವಂತೆ ಜಿಪಂ ಸಿಇಓ ಲವಿಶ್ ಓರಡಿಯಾ ತಿಳಿಸಿದ್ದಾರೆ.

ಇಲ್ಲಿನ ಜಿಪಂ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ಯಮಿಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆಯ ಜಿಲ್ಲಾ ಮಟ್ಟದ ಅರಿವು ಮೂಡಿಸುವ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಆತ್ಮ ನಿರ್ಭರ ಭಾರತ ಅಭಿಯಾನದಡಿ ಇರುವ ಈ ಯೋಜನೆಯ ಲಾಭ ಪಡೆಯಬೇಕು. ಇಲ್ಲಿ ವೈಯಕ್ತಿಕ ಉದ್ದಿಮೆಗಳು ಮತ್ತು ಗುಂಪುಗಳೊಂದಿಗೆ ಉದ್ಯೋಗ ಮಾಡಬಹುದು. 15 ಲಕ್ಷ ರೂ. ವರೆಗೂ ಸಹಾಯಧನ ಸಿಗುತ್ತದೆ. ಇದರಲ್ಲಿ ಕೇಂದ್ರ ಸರ್ಕಾರ 6 ಲಕ್ಷ ರೂ. ಮತ್ತು ರಾಜ್ಯ ಸರ್ಕಾರ 9 ಲಕ್ಷ ರೂ. ಸೇರಿರುತ್ತದೆ ಎಂದು ಅವರು ವಿವರಿಸಿದರು.

ಈ ಯೋಜನೆಯ ಹಲವು ಆಯಾಮಗಳ ಬಗ್ಗೆ ಹೇಳಿದರು. ಜಂಟಿ ಕೃಷಿ ನಿರ್ದೇಶಕ ರತೇಂದ್ರ‌ನಾಥ ಸೂಗುರು ಮಾತನಾಡಿ, ಇದೊಂದು ಬಹು ಉಪಯುಕ್ತ ಯೋಜನೆಯಾಗಿದ್ದು, ಇದರ ಲಾಭ ಗಿರಿಜಿಲ್ಲೆಯ ಜನರು ಪಡೆಯಬೇಕೆಂದರು.

ಕೆಎಪಿಪಿಇಸಿ ಅಧಿಕಾರಿ ಚಂದ್ರಕುಮಾರ ಈ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಅಗ್ರಶ್ರೇಣಿ ಬ್ಯಾಂಕಿನ ವ್ಯವಸ್ಥಾಪಕ ಭೀಮರಾವ ಪಂಚಾಳ್, ಉಪ ಕೃಷಿ ನಿರ್ದೇಶಕರು, ಜಿಲ್ಲೆಯ ವಿವಿಧ ತಾಲೂಕುಗಳ ಸಹಾಯಕ ಕೃಷಿ ನಿರ್ದೇಶಕರು, ನಬಾರ್ಡ್ ಬ್ಯಾಂಕ್ ವ್ಯವಸ್ಥಾಪಕರು, ತೋಟಗಾರಿಕೆ ಉಪ ನಿರ್ದೇಶಕರು, ಪಶುಸಂಗೋಪನೆ ಉಪನಿರ್ದೇಶಕರು, ನಗರ ಅಭಿವೃದ್ಧಿ ಕೋಶದ ಅಧಿಕಾರಿಗಳು, ಎನ್ ಆರ್ ಎಲ್ ಎಮ್ ಅಧಿಕಾರಿಗಳು, ಯೋಜನೆಯ ಫಲಾನುಭವಿಗಳು, ಆಸಕ್ತ ಯುವ ಯುವತಿಯರು ಕೃಷಿ ಸಖಿಯರು, ಉದ್ಯಮಿಗಳು ಮತ್ತು ರೈತ ಉತ್ಪಾದಕ ಸಂಸ್ಥೆ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸುಮಾರು 200ಕ್ಕೂ ಹೆಚ್ಚು ಫಲಾನುಭವಿಗಳು ಮತ್ತು ಆಸಕ್ತರು ಭಾಗವಹಿಸಿದ್ದರು. ತರಬೇತಿ ನಂತರ ಆಸಕ್ತ ಸುಮಾರು 30 ಯುವಕರು ಈ ಯೋಜನೆಯಡಿ ಉದ್ಯೋಗ ಕೈಗೊಳ್ಳಲು ತಮ್ಮ ಹೆಸರು ನೊಂದಾಯಿಸಿದರು. ಸಹಾಯಕ ಕೃಷಿ ನಿರ್ದೇಶಕ ರಾಜಕುಮಾರ ನಿರೂಪಿಸಿದರು ಮತ್ತು ಕೆಎಪಿಪಿಇಸಿ ಪ್ರಧಾನ ಕಚೇರಿಯ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News