Yadgiri | 260ಕ್ಕೂ ಹೆಚ್ಚು ಜನರಿಗೆ ಉಚಿತ ಆರೋಗ್ಯ ಸೇವೆ; ನಾಯ್ಕಲ್ ಗ್ರಾಮದಲ್ಲಿ ಸಮುದಾಯ ಆರೋಗ್ಯ ಶಿಬಿರ ಯಶಸ್ವಿ

ಸ್ಮೈಲ್ ಫೌಂಡೇಶನ್–ಇಂಡೋಸ್ಟಾರ್ ಕ್ಯಾಪಿಟಲ್ ಹಾಗೂ ಆರೋಗ್ಯ ಇಲಾಖೆಯ ಸಹಯೋಗ

Update: 2026-07-17 19:07 IST

ಯಾದಗಿರಿ : ಸ್ಮೈಲ್ ಫೌಂಡೇಶನ್, ಇಂಡೋಸ್ಟಾರ್ ಕ್ಯಾಪಿಟಲ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಉಚಿತ ಸಮುದಾಯ ಆರೋಗ್ಯ ಶಿಬಿರ ಯಶಸ್ವಿಯಾಗಿ ನಡೆಯಿತು. ಶಿಬಿರದಲ್ಲಿ 260ಕ್ಕೂ ಹೆಚ್ಚು ಗ್ರಾಮಸ್ಥರು ಆರೋಗ್ಯ ತಪಾಸಣೆಯ ಸೌಲಭ್ಯ ಪಡೆದುಕೊಂಡರು.

ತಡೆಗಟ್ಟುವ ಆರೋಗ್ಯ ರಕ್ಷಣೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಿದ್ದ ಶಿಬಿರದಲ್ಲಿ ಜೀವನಶೈಲಿ ಸಂಬಂಧಿತ ಕಾಯಿಲೆಗಳು, ಆರಂಭಿಕ ಹಂತದಲ್ಲೇ ರೋಗ ಪತ್ತೆ ಹಾಗೂ ನಿಯಮಿತ ಆರೋಗ್ಯ ತಪಾಸಣೆಯ ಮಹತ್ವದ ಕುರಿತು ಜನರಿಗೆ ಮಾಹಿತಿ ನೀಡಲಾಯಿತು.

ಸ್ಮೈಲ್ ಫೌಂಡೇಶನ್‌ನ ಯೋಜನಾ ಸಂಯೋಜಕ ಅಬ್ದುಲ್ ಶಫೀ ಅಹ್ಮದ್ ಮಾತನಾಡಿ, ಉಚಿತ ಆರೋಗ್ಯ ಶಿಬಿರಗಳು ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ನೆರವಾಗುತ್ತವೆ. ಜೊತೆಗೆ ತಡೆಗಟ್ಟುವ ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಹೆಚ್ಚಿಸುತ್ತವೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಲಸಿಕಾ ಸಂಯೋಜಕ ಹಾಗೂ ಕರ್ನಾಟಕ ರಾಜ್ಯ ಪ್ರೊಫೆಷನಲ್ ಸೋಷಿಯಲ್ ವರ್ಕರ್ಸ್ ವೆಲ್ಫೇರ್ ಅಸೋಸಿಯೇಷನ್‌ನ ಯಾದಗಿರಿ ಜಿಲ್ಲಾಧ್ಯಕ್ಷ ಮೌನೇಶ ಪಾಟೀಲ್ ಬೆಳಗೇರಾ ಮಾತನಾಡಿ, ಸ್ಮೈಲ್ ಫೌಂಡೇಶನ್ ಪ್ರತಿದಿನ ಗ್ರಾಮಗಳಿಗೆ ತೆರಳಿ ಮೊಬೈಲ್ ವೈದ್ಯಕೀಯ ಸೇವೆ, ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.

ಶಿಬಿರದಲ್ಲಿ ಯಿಮ್ಸ್ ಆಸ್ಪತ್ರೆಯ ಜನರಲ್ ಮೆಡಿಸಿನ್ ತಜ್ಞ ಡಾ. ಶರಣಬಸಪ್ಪ ಬಿ., ಪಾಟೀಲ್ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞೆ ಡಾ. ವಿದ್ಯಾ ಜಿ. ನಾಡಗೌಡರ್ ಹಾಗೂ ಯಿಮ್ಸ್ ಆಸ್ಪತ್ರೆಯ ಭೌತಚಿಕಿತ್ಸಕ ಡಾ. ಮೊಹಮ್ಮದ್ ಮುಬೀನ್ ಆಶರ್ ವಿವಿಧ ಆರೋಗ್ಯ ಸೇವೆಗಳನ್ನು ಒದಗಿಸಿದರು.

ಉಚಿತ ಸಾಮಾನ್ಯ ಆರೋಗ್ಯ ತಪಾಸಣೆ, ಕಣ್ಣಿನ ತಪಾಸಣೆ, ಭೌತಚಿಕಿತ್ಸೆ ಸಲಹೆ, ಔಷಧ ವಿತರಣೆ, ಕನ್ನಡಕ ಹಾಗೂ ಪ್ರಥಮ ಚಿಕಿತ್ಸಾ ಕಿಟ್‌ಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಶಿಬಿರಕ್ಕೆ ಗ್ರಾಮಸ್ಥರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಕಾರ್ಯಕ್ರಮದಲ್ಲಿ ರಮೇಶ್ ಎಂ. ಹೊಸಳ್ಳಿ, ಕುಮಾರಿ ರಾಜಶ್ರೀ, ಸಿದ್ದುಬಸಯ್ಯ, ಮೊಯಿನುದ್ದೀನ್ ಸೌದಾಗರ್, ವೆಂಕಟ್ ರೆಡ್ಡಿ ಸೇರಿದಂತೆ ಗ್ರಾಮದ ಮುಖಂಡರು, ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News