ವಡಿಗೇರಾ | ಸಾಮಾಜಿಕ ಲೆಕ್ಕಪರಿಶೋಧನೆ ಆಕ್ಷೇಪಣೆಗಳನ್ನು ಶೀಘ್ರ ಇತ್ಯರ್ಥಪಡಿಸಿ: ಇಒ ಶಶಿಧರ ಹಿರೇಮಠ

Update: 2026-07-17 18:38 IST

ವಡಿಗೇರಾ : 2014ರಿಂದ 2025ರವರೆಗಿನ ಸ್ಥಳೀಯ ಸಾಮಾಜಿಕ ಲೆಕ್ಕಪರಿಶೋಧನೆ ವರದಿಗಳಲ್ಲಿನ ಆಕ್ಷೇಪಣೆಗಳನ್ನು ಅಗತ್ಯ ದಾಖಲೆಗಳೊಂದಿಗೆ ಶೀಘ್ರ ಇತ್ಯರ್ಥಪಡಿಸಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಹಿರೇಮಠ ಸೂಚಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಡ್-ಹಾಕ್ ಪ್ರಗತಿ ಪರಿಶೀಲನಾ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ಸಭೆಯಲ್ಲಿ ಸೂಚಿಸಿದಂತೆ ಸಾಮಾಜಿಕ ಲೆಕ್ಕಪರಿಶೋಧನೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಲ್ಲಿಸಿ ಬಾಕಿ ಇರುವ ಆಕ್ಷೇಪಣೆಗಳನ್ನು ಪರಿಹರಿಸಬೇಕು ಎಂದರು.

ಬಾಕಿ ವಸೂಲಾತಿ ಮೊತ್ತವನ್ನು ಪಾವತಿಸಿ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು. ಪದೇ ಪದೇ ಸಭೆಗೆ ಬಂದು ಹಿಂದಿರುಗುವುದಕ್ಕಿಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ವಿಬಿ-ಜಿ ರಾಮ್‌ಜಿ ಯೋಜನೆಯ ಸಮರ್ಪಕ ಅನುಷ್ಠಾನ, ಎನ್‌ಎಂಆರ್ ನಿರ್ವಹಣೆ ಹಾಗೂ ಕಾರ್ಮಿಕರಿಗೆ ನಿರಂತರ ಕೆಲಸ ಕಲ್ಪಿಸುವಂತೆ ತಿಳಿಸಿದ ಅವರು, ಪ್ರಗತಿಯಲ್ಲಿರುವ ಶಾಲಾ ಕಟ್ಟಡ, ಶೌಚಾಲಯ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಗುಣಮಟ್ಟ ಕಾಪಾಡಿಕೊಂಡು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ತೆರಿಗೆ ವಸೂಲಾತಿಯಲ್ಲಿ ನಿಗದಿತ ಗುರಿ ಸಾಧಿಸಲು ಅಧಿಕಾರಿಗಳು ಮತ್ತು ಸಿಬ್ಬಂದಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮಳೆಗಾಲ ಆರಂಭವಾಗಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ, ಸ್ವಚ್ಛತೆ ಕಾಪಾಡುವುದು ಹಾಗೂ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು (ಗ್ರಾಉ) ಕಿರಾಣಬಾಬು, ಸಹಾಯಕ ಲೆಕ್ಕಧಿಕಾರಿ ಶರಣಬಸವ, ಪಿಡಿಓ ಗಳು, ಸ್ಥಳೀಯ ಲೆಕ್ಕಾ ಪರಿಶೋಧನೆ ಸಹಾಯಕ ಲೆಕ್ಕಾಧಿಕಾರಿಗಳು ಪ್ರಶಾಂತ, ಟಿಸಿ ರವೀಂದ್ರ ದೇಸಾಯಿ, ಟಿಐಇಸಿ ದುರ್ಗೇಶ್, ಟಿಎಇ, ಟಿಎಎ, ಸೋಷಿಯಲ್ ಕೋರ್ಡಿನೆಟರ್ ಸಿದ್ದಲಿಂಗರೆಡ್ಡಿ, ದೀಕ್ಷಿತ್, ಡಿಇಓ ಗಳು ಹಾಗೂ ತಾಪಂ, ಗ್ರಾಪಂ ಸಿಬ್ಬಂದಿಗಳು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News