ಯಾದಗಿರಿ: ರೈತರು ಕೃಷಿಯಿಂದ ವಿಮುಖರಾಗಿ ಊರು ಬಿಟ್ಟು ವಲಸೆ ಹೋಗಬಾರದು. ಕೃಷಿಯಲ್ಲಿನ ಹೊಸ ತಂತ್ರಜ್ಞಾನ ಹಾಗೂ ಪ್ರಗತಿಪರ ರೈತರ ಅನುಭವಗಳನ್ನು ಪಡೆದು ತಮ್ಮ ಗ್ರಾಮಗಳಲ್ಲಿಯೇ ಸಾಧನೆ ಮಾಡಬೇಕು ಎಂದು ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಕರೆ ನೀಡಿದರು.

ನವ ಕರ್ನಾಟಕ ರೈತ ಸಂಘದ ವತಿಯಿಂದ ಡಿ.12ರಿಂದ 14ರವರೆಗೆ ಕಲಬುರಗಿಯಲ್ಲಿ ಆಯೋಜಿಸಿರುವ ರಾಷ್ಟ್ರಮಟ್ಟದ ಕೃಷಿ ಮೇಳ ಹಾಗೂ ರೈತ ಸಮಾವೇಶದ ಅಂಗವಾಗಿ ಶುಕ್ರವಾರ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಕೃಷಿ ಮೇಳದಲ್ಲಿ ಆಧುನಿಕ ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ, ಅಣಬೆ ಮತ್ತು ಹೂವಿನ ಕೃಷಿ ಹಾಗೂ ಕಡಿಮೆ ನೀರಿನಲ್ಲಿ ಹೆಚ್ಚು ಇಳುವರಿ ಪಡೆಯುವ ತಂತ್ರಜ್ಞಾನಗಳ ಕುರಿತು ಮಾಹಿತಿ ನೀಡಲಾಗುವುದು. ರೈತರ ಸಮಸ್ಯೆಗಳು, ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಹಾಗೂ ಸರ್ಕಾರದ ಕೃಷಿ ಯೋಜನೆಗಳ ಕುರಿತು ಚರ್ಚಿಸಲಾಗುವುದು. ಮೂರು ದಿನಗಳ ಸಮಾವೇಶದಲ್ಲಿ ಒಂದೂವರೆ ಲಕ್ಷ ರೈತರು ಭಾಗವಹಿಸುವ ನಿರೀಕ್ಷೆಯಿದ್ದು, ರೈತರಿಗೆ ಉಚಿತ ಊಟ ಮತ್ತು ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಯಾದಗಿರಿ ಜಿಲ್ಲೆಯ ರೈತರು ಸಮಾವೇಶದಲ್ಲಿ ಭಾಗವಹಿಸಿ ಕೃಷಿ ತಜ್ಞರು ಹಾಗೂ ಸಾಧಕ ರೈತರ ಅನುಭವದ ಮಾತುಗಳನ್ನು ಆಲಿಸಬೇಕು. ವಲಸೆ ಹೋಗುವ ಬದಲು ತಮ್ಮ ಊರುಗಳಲ್ಲಿಯೇ ಕೃಷಿಯಲ್ಲಿ ಹೊಸ ಸಾಧ್ಯತೆಗಳನ್ನು ಕಂಡುಕೊಂಡು ಸಾಧನೆ ಮಾಡಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಬಸವರಾಜ ದೇಶಮುಖ, ಟಿ.ಎನ್. ಭೀಮುನಾಯಕ್, ಶಶಿಕಾಂತ್ ಮೋಜನ್, ಸಂತೋಷ್ ಗುತ್ತೇದಾರ್, ದಿವ್ಯಾ ಹಗರಾಗಿ, ಮೌಲಾಲಿ ಅನುಪೂರ, ಸಿದ್ಧಪ್ಪ ಹೊಟ್ಟಿ, ಕಾಂತು ಪಾಟೀಲ್, ವಿಶ್ವನಾಥ ನಾಯಕ, ತೇಜರಾಜ್ ರಾಠೋಡ್, ವಿಜಯ ಮುಷ್ಟುರ, ಚಂದ್ರಕಲಾ, ಚನ್ನಯ್ಯ ಮಳಿಕೇರಿ, ಸಿದ್ದು ನಾಯಕ, ನಿಂಗಪ್ಪ ಗುಡಗುಡಿ, ವಿಶ್ವಾರಾಧ್ಯ ಹೊನಗೇರ, ಸಿದ್ದಪ್ಪ ಕ್ಯಾಸಪನಹಳ್ಳಿ, ಅಶೋಕ ನಾಯಕ, ಸುಭಾಷ್ ಅಲ್ಲಿಪುರ, ಜನಾರ್ಧನ್ ಬಡಿಗೇರ, ಮೋನೇಶ್ ಮಾದ್ವರ, ತಿಮ್ಮಣ್ಣ ಕಟ್ಟಿಮನಿ, ರವಿ ನಾಯಕ್, ಮಹೇಶ್ ಸೈದಾಪುರ, ಮಲ್ಲಿಕಾರ್ಜುನ್ ಸಾಂಗ್ಲಿಯಾನ, ಬಸ್ಸು ಚಟ್ನಳ್ಳಿ ಸೇರಿದಂತೆ ರೈತ ಸಂಘದ ಮುಖಂಡರು, ಪದಾಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶರಬು ಬಿ.ನಾಟೇಕಾರ್ ಯಾದಗಿರಿ/ವಾರ್ತಾಭಾರತಿ

ಯಾದಗಿರಿ ಜಿಲ್ಲಾ ವರದಿಗಾರರು

ಶರಬು ಬಿ.ನಾಟೇಕಾರ್ ಅವರು 2018ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಳೆದ ಎಂಟು ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ವಿವಿಧ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಪ್ರಸ್ತುತ ವಾರ್ತಾಭಾರತಿ ದಿನಪತ್ರಿಕೆಯ ಯಾದಗಿರಿ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ