ಯಾದಗಿರಿ | ಜು.18ರಂದು ದಲಿತರ ಭೂಮಿ, ವಸತಿ ಹಕ್ಕಿಗಾಗಿ ಹೋರಾಟ : ಮಾಳಪ್ಪ ಕಿರದಳ್ಳಿ
ಸುರಪುರ: ರಾಜ್ಯ ಮತ್ತು ದೇಶದಲ್ಲಿನ ಎಲ್ಲ ದಲಿತರಿಗೆ ಭೂಮಿ ಹಾಗೂ ವಸತಿ ಹಕ್ಕಿಗಾಗಿ ನಮ್ಮ ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಎಲ್ಲಾ ತಾಲೂಕು ಕೇಂದ್ರಗಳ ತಹಶೀಲ್ದಾರ್ ಕಚೇರಿ ಮುಂದೆ ಜು.18 ರಂದು ಒಂದು ದಿನದ ಧರಣಿಯನ್ನು ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಘಟನೆಯ ಜಿಲ್ಲಾ ಸಂಚಾಲಕ ಮಾಳಪ್ಪ ಕಿರದಳ್ಳಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾವುದೇ ಸರಕಾರ ಒಬ್ಬ ವ್ಯಕ್ತಿ ಎಷ್ಟು ಭೂಮಿಯನ್ನು ಹೊಂದಬೇಕು ಮತ್ತು ಅದಕ್ಕಿಂತ ಹೆಚ್ಚಿನ ಭೂಮಿಯನ್ನು ದಲಿತರಿಗೆ ಹಂಚಿಕೆ ಮಾಡಬೇಕು ಎಂದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರರು ಹೇಳಿದ್ದಾರೆ. ಆದರೆ ಇಂದು ಎಲ್ಲವೂ ನಮಗೆ ಇರಲಿ ಎನ್ನುವಂತೆ ದೊಡ್ಡ ದೊಡ್ಡ ಬಂಡವಾಳ ಶಾಹಿಗಳು ಎಲ್ಲ ಭೂಮಿಯನ್ನು ನುಂಗುತ್ತಿದ್ದು, ಇದರಿಂದ ದಲಿತರಿಗೆ ಭೂಮಿ ಇಲ್ಲದಂತಾಗಿದೆ .ಇದನ್ನು ವಿರೋಧಿಸಿ ಧರಣಿ ನಡೆಯಲಿದೆ ಎಂದರು.
ಈ ವೇಳೆ ಹೋರಾಟದ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿದ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ರಾಮಣ್ಣ ಕಲ್ಲದೇವನಹಳ್ಳಿ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆ ತಾಲೂಕು ಸಂಚಾಲಕ ಶರಣಪ್ಪ ತಳವಾರಗೇರ, ಹುಣಸಗಿ ತಾಲೂಕು ಸಂಚಾಲಕ ಸಿದ್ರಾಮಪ್ಪ ಚೆನ್ನೂರ, ಗೊಲ್ಲಾಳಪ್ಪ ಕಟ್ಟಿಮನಿ, ಪರಶುರಾಮ ಸಾಸನೂರ ವಕೀಲ, ಪ್ರಕಾಶ ಕಟ್ಟಿಮನಿ ವಕೀಲ, ಸಾಹೇಬಗೌಡ ಟಣಕೇದಾರ, ಕೆಂಚಪ್ಪ ಕಟ್ಟಿಮನಿ, ಹೊನ್ನಪ್ಪ ಕಟ್ಟಿಮನಿ, ಮರೆಪ್ಪ ಕಟ್ಟಿಮನಿ, ಹಣಮಂತ ಅಂಬಲಿಹಾಳ ಕಿರದಳ್ಳಿ ಉಪಸ್ಥಿತರಿದ್ದರು.
ದೇವನಹಳ್ಳಿಯಲ್ಲಿ ರೈತರ ಫಲವತ್ತಾದ ಭೂಮಿಯನ್ನು ಕಿತ್ತುಕೊಳ್ಳಲು ಬಂಡವಾಳ ಶಾಹಿಗಳ ಜೊತೆ ಸೇರಿ ಸರಕಾರ ಮುಂದಾಗಿತ್ತು. ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರು ಅಲ್ಲಿಯ ಹೋರಾಟದಲ್ಲಿ ಭಾಗವಹಿಸಿ ಸರಕಾರಕ್ಕೆ ಭೂಮಿ ನೀಡುವುದಿಲ್ಲ ಎಂದು ಹೋರಾಟ ಮಾಡಿದ್ದರಿಂದ ಸರಕಾರ ಇಂದು ಭೂಮಿ ಪಡೆಯುವ ಯೋಚನೆ ಕೈಬಿಟ್ಟಿರುವುದು ಸಂತೋಷ ತಂದಿದೆ. ಎಲ್ಲ ಹೋರಾಟಗಾರರಿಗೆ ಮತ್ತು ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ.
- ರಾಮಣ್ಣ ಕಲ್ಲದೇವನಹಳ್ಳಿ ರಾಜ್ಯ ಸಂ.ಸಂಚಾಲಕರು ಕೆಡಿಎಸ್‌ಎಸ್ (ಅಂಬೇಡ್ಕರ್ ವಾದ)