ಯಾದಗಿರಿ | ಕದಸಂಸ ಭೀಮವಾದ ಸಂಘಟನೆ ವತಿಯಿಂದ ನೂತನ ಜಿಲ್ಲಾಧಿಕಾರಿಗಳಿಗೆ ಸನ್ಮಾನ
ಯಾದಗಿರಿ: ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಹರ್ಷಲ್ ಬೋಯರ್ ಅವರನ್ನು ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) ಭೀಮವಾದ ಜಿಲ್ಲಾ ಸಂಚಾಲಕರಾದ ಶರಣು ಎಸ್.ನಾಟೇಕರ್ ಅವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ನಂತರ ನೀಡಿದ ಮನಿವಿ ಪತ್ರದಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಎಗ್ಗಿಲ್ಲದೇ ಅಕ್ರಮ ಮದ್ಯ ಮಾರಾಟದ ಹಾವಳಿ ಉಂಟಾಗಿದ್ದು, ಇದರಿಂದ ಯುವಕರು, ನಗರ ಮತ್ತು ಗ್ರಾಮೀಣ ಪ್ರದೇಶದ ಜನತೆ ವಿಶೇಷವಾಗಿ ಅವಿದ್ಯಾವಂತರು ಮುದುಕರು ಎನ್ನದೆ ಎಲ್ಲರಿಗೂ ಸಮಸ್ಯೆಯಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿ ನಡೆಯುತ್ತಿದೆ. ಇನ್ನು ವಿಶೇಷವೆಂದರೆ ಗ್ರಾಮೀಣ ಪ್ರದೇಶದಲ್ಲಿ ಕಿರಾಣಿ ಅಂಗಡಿ ಗೂಡಂಗಡಿಗಳಲ್ಲಿಯೂ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುವುದು ನಡೆದಿದೆ. ಇದರಿಂದಾಗಿ ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತಿದ್ದು, ಕೃಷಿ ಕೂಲಿಕಾರರು ವಿಶೇಷವಾಗಿ ಚಟಕ್ಕೆ ಇಡಾಗಿ ಕುಟುಂಬಗಳೇ ಸರ್ವ ನಾಶ ಆಗುತ್ತಿವೆ ಎಂದು ತಿಳಿಸಿದರು.
ಇದಕ್ಕೆಲ್ಲಾ ಕಡಿವಾಣ ಹಾಕಬೇಕಾದ ಅಬಕಾರಿ ಇಲಾಖೆ ಕಣ್ಣು ಮುಚ್ಚಿಕೊಂಡು ಮಲಗಿಕೊಂಡು ಬಿಟ್ಟಿದೆ. ಇದರಿಂದಾಗಿ ಅಕ್ರಮ ತಡೆಯಬೇಕಾದವರೇ ಅಕ್ರಮಕ್ಕೆ ಕುಮ್ಮಕ್ಕು ಕೊಡುವ ನಿಟ್ಟಿನಲ್ಲಿ ದಿವ್ಯ ನಿರ್ಲಕ್ಷ್ಯ ತೋರುತ್ತಿರುವುದು ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಿದೆ. ಅಬಕಾರಿ ಇಲಾಖೆ ಕಚೇರಿ ನಗರದ ನಾಧ ಹೊಟೆಲ್ ಅವರಣದಲ್ಲಿ ಇಟ್ಟಿರುವುದರಿಂದ ಸಮಸ್ಯೆಗೆ ಇನ್ನಷ್ಟು ಇಂಬು ದೊರೆತಂತಾಗಿದ್ದು, ಜಿಲ್ಲಾಮಟ್ಟದ ಕಚೇರಿ ಮಿನಿ ವಿಧಾನಸೌಧ ಆವರಣದಲ್ಲಿ ಇರಬೇಕು. ಆದರೆ, ಖಾಸಗಿ ಹೊಟೆಲ್ ನಲ್ಲಿರುವುದರಿಂದ ಇದು ಕಚೇರಿಯೋ ಹೊಟೆಲೋ ಎಂಬುದು ಗೊತ್ತಾಗದಂತೆ ಆಗಿ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಈ ಎಲ್ಲಾ ಸಮಸ್ಯೆಗಳ ಬಗ್ಗೆ ಸೂಕ್ತ ತನಿಖೆ ಮಾಡಿ ಅಗತ್ಯ ಕ್ರಮ ಕೈಗೊಂಡು ಜಿಲ್ಲೆಯಲ್ಲಿ ಅಕ್ರಮ ಮದ್ಯದ ಹಾವಳಿ ತಡೆಯಬೇಕು. ಇದನ್ನು ತಡೆಯಲು ವಿಫಲವಾದ ಅಬಕಾರಿ ಇಲಾಖೆ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ದಲಿತ ಸಂಘರ್ಷ ಸಮಿತಿ ಹೋರಾಟ ರೂಪಿಸಲಿದೆ ಎಂದು ತಿಳಿಸಿದರು.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಜಿಲ್ಲಾದ್ಯಕ್ಷ ಶರಣು ಎಸ್.ನಾಟೇಕರ್ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಭೀಮರಾಯ ಕಾಗಿ, ಖಂಡಪ್ಪ ಸಾಹುಕಾರ್, ಶರಣು ಸಿ ಮಮ್ಮದರ್, ಗಿರೀಶ್ ಚಟ್ಟೇಕರ್, ಹಣಮಂತ ಕಚಕನೂರ್, ಪ್ರಭು ಕಚಕನೂರ್, ಮಲ್ಲಿಕಾರ್ಜುನ ನಾಟೇಕರ್, ಬಸವರಾಜ ಯಲಸತ್ತಿ, ಸಂಪತ್ ಗುಳೇದ್, ರಮೇಶ್ ವಿಭೂತಿ, ಕೃಷ್ಣ ಇನ್ನಿತರರು ಇದ್ದರು.