ಯಾದಗಿರಿ | ಕೂಲಿ ಕೆಲಸಕ್ಕಾಗಿ ತಾಲೂಕು ಪಂಚಾಯತ್ ಮುಂದೆ ಕೂಲಿಕಾರರ ಪ್ರತಿಭಟನೆ
ಸುರಪುರ: ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಕೂಲಿಕಾರ್ಮಿಕರಿಗೆ ಉದ್ಯೋಗ ಖಾತ್ರಿ ಕೆಲಸ ನೀಡುವಂತೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿಯಿಂದ ನಗರದ ತಾಲೂಕು ಪಂಚಾಯತ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ದವಲಸಾಬ್ ನದಾಫ್ ಮಾತನಾಡಿ, ಬೋನ್ಹಾಳ, ನಾಗರಾಳ, ಆಲ್ದಾಳ, ದೇವಿಕೇರಿ ಗ್ರಾಪಂ ವ್ಯಾಪ್ತಿಯ ರತ್ತಾಳ, ದೇವಾಪುರ ಗ್ರಾಪಂನ ಶೆಳ್ಳಗಿ, ಮುಷ್ಠಳ್ಳಿ, ಹೆಗ್ಗಣದೊಡ್ಡಿಯ ಗ್ರಾಪಂನ ಹೆಗ್ಗಣದೊಡ್ಡಿ ಗ್ರಾಮಗಳ ಗ್ರಾಮಸ್ಥರಿಗೆ ನರೇಗಾ ಯೋಜನೆಯಡಿ 90ಕ್ಕೂ ಹೆಚ್ಚು ಮಾನವ ದಿನಗಳು ಬಾಕಿ ಉಳಿದಿದ್ದರೂ, ಕೆಲಸ ನೀಡದೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕೂಲಿಕಾರ್ಮಿಕರಿಗೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕೂಲಿಕಾರ್ಮಿಕರ ವಸತಿ ಮನೆಗಳ ಜಿಪಿಎಸ್ ಮಾಡಿ ಎರಡು ತಿಂಗಳಾದರೂ ತಾಪಂ ಲಾಗಿನ್‌ನಲ್ಲಿದ್ದರೂ ವಸತಿ ಮನೆಗಳ ತಾಂತ್ರಿಕ ಅಧಿಕಾರಿ ಎಫ್‌ಟಿಒ ಮಾಡುತ್ತಿಲ್ಲ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸದಿದ್ದರೆ ತಾಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಸೋಮಣ್ಣ ಕಟ್ಟಿಮನಿ ಆಲ್ದಾಳ, ಶರಣಬಸವ ಜಂಬಲದಿನ್ನಿ, ಭೀಮರಾಯ ರತ್ತಾಳ, ಸಿದ್ದಮ್ಮ ಬೋನ್ಹಾಳ, ರಾಘವೇಂದ್ರ ಕುರಾಳಪುರ, ಮಹಿಬೂಬು ಖುರೇಶಿ, ಲಾಳೇ ಪಟೇಲ, ಮಲ್ಲಪ್ಪ ಕುರಳಾಪುರ, ಪೀರಸಾಬ್, ಝಾಕೀರ್ ಹುಸೇನ್, ಮಲ್ಲಮ್ಮ ಕೊಂಡಾಪುರ, ಈರಮ್ಮ ರತ್ತಾಳ, ಸಿದ್ಧಮ್ಮ ಹಾಲಗೇರಿ, ಐಯ್ಯಮ್ಮ, ಮಹಾದೇವಿ, ಸಿದ್ಧಮ್ಮ ಪಜ್ಜಾಪುರ, ತಿರುಪತಿ ಹುದ್ದಾರ, ಮಾನಪ್ಪ ಸೇರಿದಂತೆ ಇತರರಿದ್ದರು.