×
Ad

ಯಾದಗಿರಿ | ಮಹಾತ್ವಾಕಾಂಕ್ಷಿ ಜಿಲ್ಲೆಯ ಕನಸು ನನಸು ಮಾಡಲು ಎಲ್ಲರೂ ಶ್ರಮಿಸೋಣ : ಡಿಸಿ ಹರ್ಷಲ್ ಭೋಯರ್

Update: 2025-07-30 17:59 IST

ಯಾದಗಿರಿ: ಜಿಲ್ಲಾಡಳಿತ, ಜಿ.ಪಂ ಸೇರಿದಂತೆ ಎಲ್ಲ ಇಲಾಖೆಗಳ ಹಿರಿಯ, ಕಿರಿಯ ಅಧಿಕಾರಿಗಳು, ಸಿಬ್ಬಂದಿ, ಜನಪ್ರತಿನಿಧಿಗಳ ಹಾಗೂ ಸಾರ್ವಜನಿಕರ ಸಹಕಾರದಿಂದ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಜಿಲ್ಲೆಯ ಕನಸು ನನಸು ಮಾಡಲು ಸಂಪೂರ್ಣವಾಗಿ ಶ್ರಮಿಸೋಣ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಹೇಳಿದರು.

ಕೇಂದ್ರ ಸರ್ಕಾರದ ನೀತಿ ಆಯೋಗದ ಮಹಾತ್ವಾಕಾಂಕ್ಷಿ ಜಿಲ್ಲೆ ಯಾದಗಿರಿ ಮತ್ತು ಮಹಾತ್ವಾಕಾಂಕ್ಷಿ ಬ್ಲಾಕ್ ವಡಗೇರಾ ಯೋಜನೆಯಡಿ ಸಂಪೂರ್ಣ ಅಭಿಯಾನ ಸಮ್ಮಾನ ಸಮಾರೋಹ ಮತ್ತು ಆಕಾಂಕ್ಷಾ ಹಾಟ್ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಾಧಕ ಅಧಿಕಾರಿ, ಸಿಬ್ಬಂದಿಗಳಿಗೆ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಪಂ ಸಿಇಒ ಲವೀಶ್ ಒರಡಿಯಾ ಅವರು, ಈ ಸಾಧನೆಗೆ ಆಶಾ, ಅಂಗನವಾಡಿ ಕಾರ್ಯಕರ್ತರು, ಶಿಕ್ಷಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳು ಹಾಕಿದ ಶ್ರಮಕ್ಕೆ ಫಲ ಸಿಕ್ಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ನೀತಿ ಆಯೋಗದ ಆದೇಶದಂತೆ ಈ ಕಾರ್ಯಕ್ರಮ ಆಯೋಜಿಸಿ, ಗುರಿ ತಲುಪಲು ಶ್ರಮಿಸಿದ ತಳಮಟ್ಟದಿಂದ ಹಿರಿಯ ಅಧಿಕಾರಿಗಳನ್ನು ಗುರುತಿಸಿ ಇಂದು ಪ್ರಮಾಣ ಪತ್ರ ನೀಡುವ ಮೂಲಕ ಗೌರವಿಸಲಾಗಿದೆ ಎಂದರು.

ಹೆಚ್ಚುವರಿ ಡಿಸಿ ರಮೇಶ ಕೋಲಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಥ್ವಿಕ್ ಶಂಕರ್, ಸಿಪಿಒ ಕುಮಲಯ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇತರರಿದ್ದರು. ಅಧಿಕಾರಿ ರಿಯಾಜ್ ಪಟೇಲ್ ನಿರೂಪಿಸಿದರು.

ಬೆಳ್ಳಿ ಪದಕ ನೀಡಿ ಗೌರವ :

ವಡಗೇರಾ ತಾಲೂಕಿನ ತಾಪಂ ಇಒ ಮಲ್ಲಿಕಾರ್ಜನ ಸಂಗ್ವಾರ್ ಅವರಿಗೆ ನೀತಿ ಆಯೋಗದ ಆದೇಶದಂತೆ ಡಿಸಿ ಹರ್ಷಲ್ ಭೋಯರ್ ಅವರು ಬೆಳ್ಳಿಪದಕ ನೀಡಿ ವಿಶೇಷವಾಗಿ ಸನ್ಮಾನಿಸಿದರು. ವಿವಿಧ ಇಲಾಖೆಗಳ ಸುಮಾರು 90 ಜನರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಸೀರೆ ಖರೀದಿಸಿದ ಡಿಸಿ :

ಇಂದಿನಿಂದ ಮೂರು ದಿನಗಳವರೆಗೂ ಇರುವ ಆಕಾಂಕ್ಷಾ ಹಾಟ್ ನ ವಿವಿಧ ಮಳಿಗೆಗಳಿಗೆ ಚಾಲನೆ ನೀಡಿದ ಡಿಸಿ ಹರ್ಷಲ್ ಭೋಯರ್ ಅವರು, ಸಿರಿ ಮಳಿಗೆ ಕಾಣುತ್ತಲೇ ಅಲ್ಲಿಗೆ ತೆರಳಿ ಸೀರೆಯೊಂದು ಖರೀದಿಸಿರು. ಅದೇ ರೀತಿ ಪೆನ್ಸಿಲ್ ಇತರೆ ವಸ್ತುಗಳನ್ನು ಸಹ ಹಣ ನೀಡಿ ಖರೀದಿಸಿದ್ದು, ಗಮನ ಸೆಳೆಯಿತು.

ಈ ವೇಳೆ ಅಲ್ಲಿ ಹಾಕಲಾಗಿರುವ ವಿವಿಧ ವಸ್ತುಗಳ ಮಾರಾಟದ ಸುಮಾರು 15ಕ್ಕೂ ಹೆಚ್ಚು ಮಳಿಗೆಗಿಗೆ ಎಸ್ಪಿ ಪ್ರಥ್ವಿಕ್ ಶಂಕರ್, ಜಿಪಂ ಸಿಇಓ ಲವೀಶ್ ಓರಡಿಯಾ ಅವರ ಜೊತೆ ಭೇಟಿ ನೀಡಿದ ಡಿಸಿ ಅವರು, ಅಲ್ಲಿನ ವಿವಿಧ ವಸ್ತುಗಳ ಬಗ್ಗೆ ತಿಳಿದುಕೊಂಡರು. ಮೂರು ದಿನಗಳ ಈ ಆಕಾಂಕ್ಷಾ ಹಾಟ್ ಸ್ಥಳಕ್ಕೆ ಜನರು ಹೆಚ್ಚಿಗೆ ಬಂದು ವಸ್ತುಗಳನ್ನು ಖರೀದಿಸಿ ವ್ಯಾಪಾರಕ್ಕೆ ಪ್ರೋತ್ಸಾಹ ನೀಡಬೇಕೆಂದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News