ಯಾದಗಿರಿ | ನಾಗರಾಳ ಗ್ರಾಮಕ್ಕೆ ಮಾದಿಗ ದಂಡೋರ ರಾಜ್ಯಾಧ್ಯಕ್ಷರ ಭೇಟಿ
ಸುರಪುರ: ಗ್ರಾಮಗಳಲ್ಲಿ ಮಾಡುವ ಯಾವುದೇ ಆಚರಣೆಗಳಲ್ಲಿ ನಮ್ಮವರು ಭಾಗವಹಿಸಿ ಹಲಗೆ ಬಾರಿಸುತ್ತಾರೆ. ಆದರೆ ನಮಗೆ ಜಾತಿ ನಿಂದನೆ ಮಾಡಿ ಹಲ್ಲೆ ಮಾಡುತ್ತಾರೆ ಇದನ್ನು ನಾವು ಖಂಡಿಸುತ್ತೇವೆ ಎಂದು ಮಾದಿಗ ದಂಡೋರ ಸಂಘಟನೆ ರಾಜ್ಯಾಧ್ಯಕ್ಷ ನರಸಪ್ಪ ದಂಡೋರ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ನಾಗರಾಳ ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ನಡೆದ ಕಾನೂನು ವಿದ್ಯಾರ್ಥಿ ದುರ್ಗಪ್ಪ ಹಾಗೂ ಆತನ ಸ್ನೇಹಿತ ವಿಜಯಕುಮಾರ ಮೇಲೆ ಅದೇ ಗ್ರಾಮದ ಮೇಲ್ವರ್ಗದ ವ್ಯಕ್ತಿಗಳಿಬ್ಬರು ರಸ್ತೆಯಲ್ಲಿ ಹೋಗುತ್ತಿರುವವರಿಗೆ ಜಾತಿ ನಿಂದನೆ ಮಾಡಿ, ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪದ ಘಟನೆ ಅಂಗವಾಗಿ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಇಲ್ಲಿರುವ ಎಲ್ಲ ಸಮುದಾಯಗಳ ಮುಖಂಡರು ಅಂತಹ ಕಿಡಿಗೇಡಿಗಳ ಬಗ್ಗೆ ಸಹನೆ ಹೊಂದದೆ ಅಂತವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿದರು.
ಅಲ್ಲದೆ ಸರಕಾರ ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ನಾಗರಾಳ ಗ್ರಾಮಕ್ಕೆ ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಮಾದಿಗ ಯುವ ಸೇನೆ ರಾಜ್ಯಾಧ್ಯಕ್ಷ ನಂದಕುಮಾರ ಕನ್ನೆಳ್ಳಿ, ಮಾದಿಗ ದಂಡೋರ ಸಂಘಟನೆಯ ಜಿಲ್ಲಾಧ್ಯಕ್ಷ ಕಾಶಪ್ಪ ಹೆಗ್ಗಣಗೇರಾ ಮಾತನಾಡಿದರು. ನಂತರ ದುರ್ಗಪ್ಪ ಅವರ ಕುಟುಂಬಕ್ಕೆ ಭೇಟಿ ನೀಡಿ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಮಾದಿಗ ದಂಡೋರ ಸಂಘಟನೆ ತಾಲೂಕು ಅಧ್ಯಕ್ಷ ಬಸವರಾಜ ಹಾದಿಮನಿ, ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಳದ ಜಿಲ್ಲಾಧ್ಯಕ್ಷ ಕಾಶಿನಾಥ ಹಾದಿಮನಿ, ವಕೀಲ ಬಸವರಾಜ ಕಟ್ಟಿಮನಿ, ನಿಂಗಪ್ಪ ದ್ಯಾಮನಾಳ, ಚನ್ನುಕುಮಾರ ಕಟ್ಟಿಮನಿ, ಮಲ್ಲು ಕೋಳೂರ, ಮಲ್ಲು ಬೆನಕನಹಳ್ಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.