ಯಾದಗಿರಿ | ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಹಾಸ್ಟೇಲ್‌ಗಳ ಹೊರಗುತ್ತಿಗೆ ನೌಕರರ ಪ್ರತಿಭಟನೆ
ಯಾದಗಿರಿ: ವಿವಿಧ ಇಲಾಖೆಗಳ ಹಾಸ್ಟೆಲ್ ಹಾಗೂ ವಸತಿ ನಿಲಯ, ಕಾಲೇಜುಗಳಲ್ಲಿ 15-20 ವರ್ಷಗಳಿಂದ ಸೇವೆಯಲ್ಲಿರುವ ಹೊರಗುತ್ತಿಗೆ ಸಿಬ್ಬಂದಿಗಳಿಗೆ ವಾರ್ಡನ್, ಗುತ್ತಿಗೆದಾರರು ಮತ್ತು ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳು ನಡೆಸುತ್ತಿರುವ ಶೋಷಣೆ ತಡೆಯಬೇಕು ಮತ್ತು ವಿವಿಧ 12 ಬೇಡಿಕೆಗಳು ಈಡೇರಿಸಬೇಕೆಂದು ಆಗ್ರಹಿಸಿ ರಾಜ್ಯ ಸರ್ಕಾರಿ ಹಾಸ್ಟೇಲ್ ಮತ್ತು ವಸತಿ ಶಾಲೆಗಳ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಘಟಕವು ಸೋಮವಾರ ಇಲ್ಲಿನ ಡಿಸಿ ಕಚೇರಿ ಮುಂದೇ ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಭೀಮಶೇಟ್ಟಿ ಯಂಪಳ್ಳಿ, ತಿಂಗಳಿಗೆ ಕನಿಷ್ಠ 36 ಸಾವಿರ ರೂ. ಮಾಸಿಕ ವೇತನವನ್ನು ನೇರವಾಗಿ ಇಲಾಖೆಯಿಂದಲೇ ನೀಡಬೇಕು. ನಿವೃತ್ತಿವರೆಗೂ ಸೇವಾ ಭದ್ರತೆ ನೀಡಬೇಕು, ವಾರಕ್ಕೆ ಒಂದು ರಜೆ ನೀಡಬೇಕು, ಕೆಲಸದ ಸಮಯ ನಿಗದಿ ಮಾಡಬೇಕೆಂದು ಆಗ್ರಹಿಸಿದರು.
ಬೀದರ ಜಿಲ್ಲೆ ಮಾದರಿಯಲ್ಲಿ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘವು ಗಿರಿಜಿಲ್ಲೆಯಲ್ಲಿ ಸ್ಥಾಪಿಸಬೇಕು, ಗುತ್ತಿಗೆದಾರರು ಸಂಬಳದ ಚೀಟಿ, ನೇಮಕಾತಿ ಆದೇಶ ಪತ್ರ, ಐಡಿ ಕಾರ್ಡ್, ಸೇವಾ ಪ್ರಮಾಣಪತ್ರ, ಇಎಸ್ಐ ಮತ್ತು ಪಿಎಫ್, ಹಣ ತುಂಬಿದ ರಶೀದಿ ನೀಡಬೇಕು. ಹಿಂದುಳಿದ ವರ್ಗ, ಸಮಾಜ ಕಲ್ಯಾಣ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಸಿಬ್ಬಂದಿಗಳ ಸಂಖ್ಯೆ ಕಡಿತ ಮಾಡಿರುವ ಆದೇಶ ರದ್ದಾಗಬೇಕೆಂದು ಯಂಪಳ್ಳಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ದಾವಲ್ ಸಾಬ್ ನಧಾಪ್, ರಾಜ್ಯ ಉಪಾಧ್ಯಕ್ಷ ಹುಲಗಪ್ಪ ಛಲವಾದಿ ಹಾಗೂ ಸಂಘದ ಪದಾಧಿಕಾರಿಗಳಾದ ದುರ್ಗಮ್ಮ ಹಳ್ಳಿಸಗರ, ವಸಂತರಾವ್ ಪೂಜಾರಿ, ಮಲ್ಲಿಕಾರ್ಜುನ ಯಕ್ಷಿಂತಿ, ಶಂಕರ ಕಡಗುಡ, ಲಲಿತಾ ಮುದನೂರ,ಬಸಣ್ಣ ಕೆಂಭಾವಿ, ರೇಣುಕಾ , ಶ್ರೀದೇವಿ ಜಂಬಲದಿನ್ನಿ, ರಂಗಮ್ಮ ಕಟ್ಟಿಮನಿ, ಬಸವರಾಜ ಖ್ಯಾತನಾಳ, ಶರಣಪ್ಪ ಗೋಗಿ ಹಾಗೂ ರಮೇಶ ಬೆಂಡೆಬೆಂಬಳಿ ಸೇರಿದಂತೆಯೇ ಇತರರಿದ್ದರು. ಡಿಸಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.