×
Ad

ಯಾದಗಿರಿ | ಕೃಷ್ಣ, ಭೀಮಾ ನದಿ ತೀರದಲ್ಲಿ ಯಾರು ಹೋಗದಂತೆ ನಿಗಾ ವಹಿಸಬೇಕು : ಡಿಸಿ ಡಾ.ಸುಶೀಲಾ ಬಿ.

Update: 2025-07-02 19:09 IST

ಯಾದಗಿರಿ: ಭೀಮಾ ಹಾಗೂ ಕೃಷ್ಣಾ ನದಿ ಸೇರಿದಂತೆ ಜಲಾಶಯಗಳ ವ್ಯಾಪ್ತಿಯಲ್ಲಿ ಯಾವುದೇ ಪರಿಸ್ಥಿತಿಯಲ್ಲಿ ಮಾನವ ಜೀವಹಾನಿಯಾಗದಂತೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಕೃಷ್ಣ ಹಾಗೂ ಭೀಮಾ ನದಿ ವ್ಯಾಪ್ತಿಯಲ್ಲಿ ಪ್ರವಾಹ ಮುನ್ನೆಚ್ಚರಿಕೆ ಕ್ರಮಗಳ ಕುರಿತು ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೃಷ್ಣ ಹಾಗೂ ಭೀಮಾ ನದಿ ತೀರದಲ್ಲಿ ಯಾರು ಹೋಗದಂತೆ ನಿಗಾ ವಹಿಸಬೇಕು. ನದಿಗಳ ಪಾತ್ರದಲ್ಲಿ, ಜಲಾಶಯ ವ್ಯಾಪ್ತಿಯಲ್ಲಿ ನೀರು ಕುಡಿಯಲು ಹೋಗುವುದಾಗಲಿ, ಈಜಲು, ಬಟ್ಟೆ ತೊಳೆಯಲು, ದನಕರ ಮೇಯಿಸಲು ಹೋಗದಂತೆ ಬೋರ್ಡ್ ಹಾಕಿಸಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಬೇಕು. ಆಯಾ ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ನೋಟಿಸ್ ಬೋರ್ಡ್ ಮೂಲಕ ಮಾಹಿತಿ ನೀಡಬೇಕು. ನದಿ ಪಾತ್ರದ ಗ್ರಾಮಗಳಲ್ಲಿ ಡಂಗುರ ಸಾರಿ ತಿಳಿ ಹೇಳಬೇಕು ಎಂದು ಸೂಚಿಸಿದರು.

ನದಿಗಳ ನೀರು ಏರಿಕೆ ಬಗ್ಗೆ ನಿಗಾ ಇಡುವ ಜೊತೆಗೆ ಜಾಗೃತಿ ಸಹ ಮೂಡಿಸಬೇಕು. ಆಯಾ ಗ್ರಾಮಗಳ ವ್ಯಾಪ್ತಿಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳು ವಾಟ್ಸ್ ಆ್ಯಪ್ ಗೃಪ್ ರಚಿಸಿಕೊಂಡು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ನಿಗಾ ಇಡಬೇಕು. ಪ್ರವಾಹ ಪರಿಸ್ಥಿತಿ ಬಗ್ಗೆ ನಿರಂತರ ನಿಗಾ ಇಡಬೇಕು. ನೋಡಲ್ ಅಧಿಕಾರಿಗಳು ಕಾಲಕಾಲಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಭಾಯಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ ಅವರು ಮಾತನಾಡಿ, ಜಿಲ್ಲೆಯಲ್ಲಿ ಓವರ್ ಹೆಡ್ ಟ್ಯಾಂಕ್, ಒಳಚರಂಡಿಗಳ ಸ್ವಚ್ಛತೆ ಸೇರಿದಂತೆ ಇನ್ನಿತರ ಮುನ್ನೆಚ್ಚರಿಕಾ ಕ್ರಮಗಳಿಗಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಕೈಗೊಂಡ ಕ್ರಮಗಳ ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News