ಯಾದಗಿರಿ | ಸಾಂಪ್ರದಾಯಿಕ ಕುರಿಗಾಹಿಗಳ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಲು ಆಗ್ರಹಿಸಿ ಆ.19 ರಂದು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ
ಯಾದಗಿರಿ: ಕುರಿಗಾಹಿಗಳ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಲು ಸರ್ಕಾರದ ಮೀನಾಮೇಷ ಖಂಡಿಸಿ ಆ.19 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕಾಯ್ದೆ ಹೋರಾಟ ಸಮಿತಿ ವತಿಯಿಂದ ʼಕುರಿಗಾರರ ನಡೆ ವಿಧಾನಸೌಧದ ಕಡೆʼ ಎಂಬ ಘೋಷವಾಕ್ಯದೊಂದಿಗೆ ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಹಾಲುಮತ ಮಹಾಸಭಾದ ರಾಜ್ಯ ಸಂಚಾಲಕ ರಾಜು ಮೌರ್ಯ ದಾವಣಗೆರೆ ಅವರು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕುರಿಗಾಹಿಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು. ಕುರಿ ಮೇಯಿಸಿ ಅರಣ್ಯ ಸಂಪತ್ತು ರಕ್ಷಣೆ ಮಾಡುವ ಕುರಿಗಾಹಿಗಳಿಗಾಗಿ ಮುಂಬರುವ ಅಧಿವೇಶನದಲ್ಲಿ ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆ ಜಾರಿಗೆ ತರಬೇಕು ಎಂದು ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆ ಹೋರಾಟ ಸಮಿತಿಯ ವತಿಯಿಂದ ಅವರು ಆಗ್ರಹಿಸಿದರು.
ಕುರಿಗಾಹಿಗಳು ಈ ದೇಶದ ಸಂಸ್ಕೃತಿಯನ್ನು ಉಳಿಸುತ್ತಿರುವವರು. ಮಳೆ, ಗಾಳಿ, ಬಿಸಿಲೆನ್ನದೇ ಕುರಿ ಹಿಂಡುಗಳೊಂದಿಗೆ ಊರೂರು ಅಲೆದಾಡುತ್ತಾ, ಕುರಿಗಳ ಆಹಾರಕ್ಕಾಗಿ ತಮ್ಮ ಕುಟುಂಬಗಳ ಜೀವಗಳನ್ನು ಲೆಕ್ಕಿಸದೇ ಅಲೆಮಾರಿಗಳಾಗಿ ಜೀವಿಸುತ್ತಿದ್ದಾರೆ. ಇಂತಹ ಕುರಿಗಾಹಿಯ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರತಿನಿಧಿಸಿದ್ದ, ಬಾಗಲಕೋಟೆ ಜಿಲ್ಲೆ, ಬಾದಾಮಿ ತಾಲ್ಲೂಕಿನ ಕೆರೂರು ಗ್ರಾಮದಲ್ಲಿ ಕುರಿಗಾಹಿಯ ಕತ್ತನ್ನು ಸೀಳಿ ಕೊಂದು ಹಾಕಿದ್ದರು. ಬೆಳಗಾವಿ ಜಿಲ್ಲೆ, ಆರಂಭಾವಿಯಲ್ಲಿ ಕುರಿಗಾಹಿಯ ಕಾಲನ್ನು ಕತ್ತರಿಸಿ ಹಾಕಿದ್ದರು. ಧಾರವಾಡ ಜಿಲ್ಲೆ, ಕುಂದಗೋಳದಲ್ಲಿ ಕುರಿಗಾಹಿ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ ಕೊಂದು ಹಾಕಿದ್ದರು. ಇವೆಲ್ಲವೂ ಬೆಳಕಿಗೆ ಬಂದಿರುವ ಕೆಲವೇ ಕೆಲವು ಘಟನೆಗಳು.
ಕಳೆದ ವಾರ ಕೊಪ್ಪಳ ತಾಲ್ಲೂಕಿನ ಬೊಲ್ಡೋಟಾ ಕಂಪನಿಯ ನೌಕರರು ಕುರಿಗಾರರಿಗೆ ರಕ್ತ ಬರುವ ಹಾಗೆ ಹೊಡೆದು ಓಡಿಸುತ್ತಿದ್ದ ಅಮಾನವೀಯ ಘಟನೆಗಳು ನಡೆದಿದೆ. ಅರಣ್ಯ ಇಲಾಖೆಯ ದೌರ್ಜನ್ಯಗಳು, ಕುರಿಗಳ ಕಳ್ಳತನಗಳು ನಿರಂತರವಾಗಿ ನಡೆಯುತ್ತಿವೆ. ಸ್ವತಃ ಕುರಿಗಾರರಾಗಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕುರಿಗಾರರ ಸಂಕಷ್ಟಗಳ ಬಗ್ಗೆ ಗೊತ್ತಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಯಾಗಬೇಕೆಂದು ಹರಕೆ ಹೊತ್ತವರು, ಕುರಿಗಳನ್ನು ಮಾರಿ ಚುನಾವಣಾ ವೆಚ್ಚಗಳಿಗೆ ಹಣವನ್ನು ನೀಡಿದ್ದು ಸಹ ಯಾರೂ ಮರೆಯುವ ಹಾಗಿಲ್ಲ ಎಂಎದು ಹೇಳಿದರು.
ಕಾಂಗ್ರೆ ಸ್ ಪಕ್ಷ ಅಧಿಕಾರದಲ್ಲಿ ಇದೆ ಎಂದರೆ ಕುರುಬ ಸಮುದಾಯ ಹೆಚ್ಚಿನ ಬೆಂಬಲ ನೀಡಿರುವುದನ್ನು ಕಾಂಗ್ರೆಸ್ ಪಕ್ಷ ಮರೆಯಬಾರದು. ಕುರಿಗಾರರ ಸಂರಕ್ಷಣಾ ಕಾಯಿದೆಯಿಂದ ಕಳ್ಳಕಾಕರಿಗೆ, ದೌರ್ಜನ್ಯ ನಡೆಸುವವವರಿಗೆ ಭಯವಾದೃೂ ಬರಬಹುದು ಎಂಬ ಕಾರಣಕ್ಕಾಗಿ ಸರ್ಕಾರಗಳ ಮುಂದೆ ಸಂರಕ್ಷಣಾ ಕಾಯಿದೆ ಜಾರಿಗೊಳಿಸುವಂತೆ ನೂರಾರು ಮನವಿಗಳನ್ನು ನೀಡಲಾಗಿದೆ.
ಕಳೆದ ಅಧಿವೇಶನದ ಬಡ್ಜೆಟ್ ನಲ್ಲೂ ಕುರಿಗಾರರ ಸಂರಕ್ಷಣಾ ಕಾಯಿದೆ ಜಾರಿ ತರುವ ಉಲ್ಲೇಖವಾಗಿತ್ತು. ಆದರೆ ಅದರ ಆದೇಶ ಮಾಡಲು ಸರ್ಕಾರ ಯಾಕೆ ಮೀನಾಮೇಷ ಎಣಿಸುತ್ತಿದೆ ? ಎಂಬುದು ಯಕ್ಷ ಪ್ರಶ್ನೆಯಾಗಿದೆ. ಕುರುಬರು ಮಾತ್ರ ಕುರಿಗಳನ್ನು ಸಾಕುತ್ತಿಲ್ಲ. ಎಲ್ಲಾ ಸಮುದಾಯದವರು ಸಹ ಕುರಿ ಸಾಕಾಣಿಕೆ ಮಾಡುತ್ತಿದ್ದಾರೆ. ಕುರಿಗಾರರು ಸರ್ಕಾರವನ್ನು ದೊಡ್ಡದಾಗಿ ಏನನ್ನು ಕೇಳುತ್ತಿಲ್ಲ. ತಮ್ಮ ಜೀವ ಮತ್ತು ಜೀವನಗಳನ್ನು ರಕ್ಷಿಸಿಕೊಳ್ಳಲು ರಕ್ಷಣೆ, ಭದ್ರತೆ ಕೇಳುತ್ತಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರ ಕುರಿಗಾರರನ್ನು ನಿರ್ಲಕ್ಷ್ಯ ಮಾಡುತ್ತಿರುವುದನ್ನು ಖಂಡಿಸಿ ದಿನಾಂಕ 19-08-2025 ರಂದು ಬೆಂಗಳೂರಿನ ಫ್ರೀ ಡಂ ಪಾರ್ಕ್ ನಲ್ಲಿ ಪ್ರ ತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿಗಳಾದ ಸ್ವತಃ ಕುರಿಗಾರರು ಆಗಿರುವ ಸಿದ್ದರಾಮಯ್ಯನವರು ಈಗಾಗಲೇ ಸಿದ್ಧವಾಗಿರುವ ಕಾಯಿದೆಯನ್ನು ಸರ್ಕಾರಿ ಆದೇಶವನ್ನಾಗಿಸಿ ಜಾರಿಗೊಳಿಸಬೇಕು ಎಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇವೆ.
ಸರ್ಕಾರವು 2024-25 ನೇ ಸಾಲಿನ ಬಜೆಟ್‌ನಲ್ಲಿ ಕುರಿಗಾಯಿಗಳಿಗೆ ಸಂಬಂಧಿಸಿದಂತೆ ದೌರ್ಜನ್ಯ ತಡೆ ಕಾಯ್ದೆ ರೂಪಿಸಲು ಪ್ರಸ್ಥಾಪಿಸಿದ್ದು ಅದರಂತೆ ಈಗ ಸರ್ಕಾರದ ಮುಂದೆ THE TRADITIONAL MIGRATORY SHEPHERDS (PROTECTION AGAINST ATROCITIES AND PROVISION OF WELFARF) BILL-2025 (REPORTED The File. In 16 March 2025) ಈ ಮಸೂದೆ ಇರುವುದನ್ನು ನಾವು ಸ್ವಾಗತಿಸುತ್ತೇವೆ.
ಈ ಮಸೂದೆಯನ್ನು ಸರ್ಕಾರವು ಆ.11 ರಂದು ನಡೆಯಲಿರುವ ಅಧಿವೇಶನದಲ್ಲಿ ಕಾಯ್ದೆಯಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿ "ಕುರಿಗಾರರ ನಡೆ ವಿಧಾನಸೌಧ ಕಡೆಗೆ” ಎಂಬ ಘೋಷ ವಾಕ್ಯದೊಂದಿಗೆ ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ ಆ.19 ರಂದು ರಾಜ್ಯದ ಎಲ್ಲ ಕುರಿಗಾಹಿಗಳು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಯಲ್ಲಿ ಎಲ್ಲ ಕುರಿಗಾಹಿಗಳು, ಶೋಷಿತ ಸಮುದಾಯಗಳ ಮುಖಂಡರು, ರೈತ ಮುಖಂಡರು, ಪ್ರಗತಿಪರ ಚಿಂತಕರು, ಭಾಗವಹಿಸುತ್ತಾರೆ ಎಂದು ತಿಳಿಸಿದರು.
ಈ ಬೃಹತ್ ಪ್ರತಿಭಟನೆ ಮೂಲಕ ರಾಜ್ಯ ಸರ್ಕಾರಕ್ಕೆ, ಮುಖ್ಯಮಂತ್ರಿಗಳಿಗೆ, ಎಲ್ಲಾ ಶಾಸಕರಿಗೆ ಕುರಿಗಾರರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವ ಮೂಲಕ THE TRADITIONAL MIGRATORY SHEPHERDS (PROTECTION AGAINST ATROCITIES AND PROVISION OF WELFARF) BILL-2025 (REPORTED The File. In 16 March 2025) ಕಾಯ್ದೆಯಾಗಿ ಜಾರಿಗೋಳಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಾಂಪ್ರದಾಯಿಕ ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆ ಹೋರಾಟ ಸಮಿತಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವಿಕುಮಾರ ಕಡೆಚೂರ, ಸದಸ್ಯರಾದ ಮಹೇಶ ಜೇಗರ್, ಸಾಬಣ್ಣ ಜೇಗರ್, ಅಯ್ಯಣ್ಣ ಹುಲ್ಕಲ್ , ಬೀರಲಿಂಗಪ್ಪ ಕಿಲ್ಲನಕೇರಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.