×
Ad

ಯಾದಗಿರಿ | ಕೇಂದ್ರ ಸರಕಾರದ ವಿರುದ್ಧ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ

Update: 2025-07-09 20:35 IST

ಸುರಪುರ: ದೇಶದಲ್ಲಿ ಆಡಳಿತ ನಡೆಸುತ್ತಿರುವ ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ನೀತಿಯನ್ನು ಕೈಬಿಡಬೇಕು ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ದವಲಸಾಬ್ ನದಾಫ್ ಆಕ್ರೋಶ ವ್ಯಕ್ತಪಡಿಸಿದರು.

ಸಿಐಟಿಯು,ಎಐಎಡಬ್ಲೂಯು ಸಂಘಟನೆಗಳ ನೇತೃತ್ವದಲ್ಲಿ ಕಾರ್ಮಿಕ ಸಂಘಟನೆಗಳು ರಾಷ್ಟ್ರವ್ಯಾಪಿ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾರ್ಮಿಕ ಕಾಯ್ದೆಗಳನ್ನು ಕೇಂದ್ರ ಸರಕಾರ ವಾಪಸ್ ಪಡೆಯಬೇಕು. ಎಪಿಎಮ್‌ಸಿ ಮತ್ತು ವಿದ್ಯುತ್ ಕಾಯ್ದೆ ಹಿಂಪಡೆಯಬೇಕು, ಉದ್ಯೋಗ ಖಾತ್ರಿ ಯೋಜನೆ ಪಟ್ಟಣಕ್ಕೂ ವಿಸ್ತರಿಸಬೇಕು ಎನ್ನುವುದು ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿದರು.

ಅಂಗನವಾಡಿ ನೌಕರರ ಸಂಘದ ತಾಲೂಕ ಅಧ್ಯಕ್ಷೆ ಬಸ್ಸಮ್ಮ ಆಲ್ಹಾಳ,ಅಕ್ಷರ ದಾಸೋಹ ನೌಕರರ ಸಂಘದ ತಾಲೂಕ ಅಧ್ಯಕ್ಷೆ ಸೈಯ್ಯದಾ ಬೇಗಂ,ರಾಧಾಬಾಯಿ ಲಕ್ಷ್ಮಿಪುರ, ಪ್ರಕಾಶ ಆಲ್ಹಾಳ ಇತರರು ಮಾತನಾಡಿದರು.

ಪ್ರತಿಭಟನೆ ಅಂಗವಾಗಿ ಎರಡು ಗಂಟೆಗಳಿಗೂ ಹೆಚ್ಚುಕಾಲ ರಸ್ತೆಯಲ್ಲಿ ಕುಳಿತು ಧರಣಿ ನಡೆಸಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. ಕೆಂಪು ಧ್ವಜ ಹಿಡಿದಿದ್ದ ನೂರಾರು ಜನ ಮಹಿಳಾ ಹೋರಾಟಗಾರ್ತಿಯರು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳ ಕೂಗಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಕ್ರೋಶ ವ್ಯಕ್ತಪಡಿಸಿದರು. ಪಿಐ ಉಮೇಶ ನಾಯಕ್ ನೇತೃತ್ವದಲ್ಲಿ ಪೊಲೀಸ್ ಬಮದೋಬಸ್ತ್ ಕೈಗೊಳ್ಳಲಾಗಿತ್ತು.

ನಂತರ ಪ್ರಧಾನಮಂತ್ರಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಕಚೇರಿ ಸಿರಸ್ತೆದಾರರ ಮೂಲಕ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ನಸೀಮಾ ಮುದನೂರ, ಸೌಭಾಗ್ಯ ಎಸ್. ಮಾಲಗತ್ತಿ, ಯಲ್ಲಮ್ಮ ತೇಲ್ಕರ್, ಅಯ್ಯಪ್ಪ ಅನ್ಸೂರ್,ಶಣಬಸವ ಜಂಬಲದಿನ್ನಿ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

ರಾಷ್ಟ್ರವ್ಯಾಪಿ ಬಂದ್ ಅಂಗವಾಗಿ ಸುರಪುರ ಮಹಾತ್ಮ ಗಾಂಧಿ ವೃತ್ತದಲ್ಲಿ ರಸ್ತೆ ತಡೆಯಲು ಮುಂದಾದ 13 ಜನ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದೊಯ್ದು ನಂತರ ಬಿಡುಗಡೆಗೊಳಿಸಲಾಯಿತು.

ಕಾರ್ಮಿಕ ಸಂಘಟನೆಗಳ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ ಅವರನ್ನು ಹಾಗೂ ಅರಣ್ಯ ಇಲಾಖೆ ಅಧಿಕಾರಿಯನ್ನು ವರ್ಗಾವಣೆ ಮಾಡಬಾರದು ಎಂದು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News