×
Ad

ಯಾದಗಿರಿ | ಜಿಲ್ಲೆಯಲ್ಲಿನ ನಕಲಿ ವೈದ್ಯರು, ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ : ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ.

Update: 2025-06-25 20:02 IST

ಯಾದಗಿರಿ: ಜಿಲ್ಲೆಯಲ್ಲಿನ ನಕಲಿ ವೈದ್ಯರು ಹಾಗೂ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಪಿಸಿಪಿಎನ್ ಡಿಟಿ ಹಾಗೂ ಕೆ.ಪಿ.ಎಮ್.ಇ ಕಾಯ್ದೆಯಡಿ ಕೋರಿ ಬಂದಿರುವ ಅರ್ಜಿಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಾವುದೇ ವೈದ್ಯಕೀಯ ಪದವಿಗಳಿಲ್ಲದೇ ನಕಲಿ ವೈದ್ಯರಿಂದ ಚಿಕಿತ್ಸೆಗೆ ಒಳಗಾಗಿ ಬಡ ಜನರ ಜೀವಕ್ಕೆ ಅಪಾಯವಾಗಬಾರದು. ನೋಂದಾಯಿತವಲ್ಲದ ಆಸ್ಪತ್ರೆ ಹಾಗೂ ನಕಲಿ ವೈದ್ಯರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಅವರು ಸೂಚನೆ ನೀಡಿದರು.

ಅದರಂತೆ ಜಿಲ್ಲೆಯಲ್ಲಿ ನಕಲಿ ವೈದ್ಯರು ಹಾಗೂ ಆಸ್ಪತ್ರೆ ಗಳಿಗಾಗಿ ಬಾಡಿಗೆ ಮನೆಗಳನ್ನೂ ನೀಡದಂತೆ ಸಾರ್ವಜನಿಕರಿಗೆ ತಿಳಿಸಿದ ಅವರು, ಇಂತಹವರಿಗೆ ಬಾಡಿಗೆ ಮನೆ ಅಥವಾ ಕಟ್ಟಡ ಒದಗಿಸಿದ ಬಗ್ಗೆ ಗೊತ್ತಾದಲ್ಲಿ ,ಅಂತಹವರ ಕಟ್ಟಡಕ್ಕೆ ನೀರು ಹಾಗೂ ವಿದ್ಯುತ್ ಸಂಪರ್ಕ ಕಡಿತದಂತಹ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆಯಡಿ ಅನಧಿಕೃತವಾಗಿ ಅಲ್ಟ್ರಾಸೋನೋಗ್ರಾಫಿ ಮಶೀನ್ ಬಳಸುವುದಾಗಲಿ, ಆಸ್ಪತ್ರೆ ನಡೆಸುವುದಾಗಲಿ ಶಿಕ್ಷಾರ್ಹ ಅಪರಾಧವಾಗಿದೆ. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು .ನಕಲಿ ವೈದ್ಯರ ಬಳಿ ಹೋಗದಂತೆಯೂ ಸೂಕ್ತ ಅರಿವು ಮೂಡಿಸುವಂತೆ ಅವರು ಸಂಬಂಧಿಸಿದ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.

ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಕಲ್ಪಿಸಲು ಅನುಕೂಲವಾಗುವಂತೆ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಸರಕಾರಿ ವಿವಿಧ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ವೈದ್ಯಾಧಿಕಾರಿಗಳು ಸಮಯಕ್ಕೆ ಸರಿಯಾಗಿ ಉಪಸ್ಥಿತರಿದ್ದು, ಜನತೆಗೆ ಸೇವೆ ಕಲ್ಪಿಸುವಂತೆ ಅವರು ಸೂಚನೆ ನೀಡಿದರು.

ಕೆಪಿಎಮ್ಇ ಕಾಯ್ದೆಯಡಿ ಜಿಲ್ಲೆಯಲ್ಲಿ 326 ಆಸ್ಪತ್ರೆ ಗಳು ನೋಂದಣಿಯಾಗಿವೆ. 2 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಅದರಂತೆ ಪಿಸಿಪಿಎನ್ ಡಿಟಿ ಕಾಯ್ದೆಯಡಿ ಹೊಸ ಸ್ಕ್ಯಾನಿಂಗ್ ಸೆಂಟರ್ ಗಳಿಂದ 3 ಅರ್ಜಿ ಕೋರಿ ಬಂದಿದ್ದು ಸಭೆಯಲ್ಲಿ ಪರಿಶೀಲಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ ಬಿರಾದಾರ್, ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಹಣುಮಂತರೆಡ್ಡಿ, ಡಾ.ರಮೇಶ, ಸರ್ಕಾರಿ ರೇಡಿಯಾಲಾಜಿಸ್ಟ ಡಾ.ಶಾಂತಲಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸುಗೂರಪ್ಪ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News