ಯಾದಗಿರಿ | ಕಲಬುರಗಿ ಗೀತಾ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಜೂ.15 ರಂದು ವಿಶೇಷ ಕಾರ್ಯಾಗಾರ
ಯಾದಗಿರಿ: ಕಲಬುರಗಿ ಹೊರವಲಯದ ಗೀತಾ ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಅಮೃತ ಸರೋವರದಲ್ಲಿ ಜೂ.15 ರಂದು ಪ್ರಥಮ ಸಲ ಮಾಧ್ಯಮ ಪ್ರತಿನಿಧಿಗಳಿಗೆ ಹಮ್ಮಿಕೊಂಡಿರುವ ವಿಶೇಷ ಕಾರ್ಯಾಗಾರದಲ್ಲಿ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಹವಹಿಸಬೇಕೆಂದು ಇಲ್ಲಿನ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ನೀರಾ ಮತ್ತು ಕಲಬುರಗಿ ವಲಯದ ಮಾಧ್ಯಮ ವಿಭಾಗದ ಸಂಯೋಜಕಿ ಅಕ್ಕ ರಾಗಿಣಿ ಮನವಿ ಮಾಡಿದ್ದಾರೆ.
ಬುಧವಾರ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ನಡೆಯಲಿರುವ ಕಾರ್ಯಾಗಾರದಲ್ಲಿ ಮೌಂಟ್ ಅಬುವಿನ ರಾಷ್ಟ್ರೀಯ ಮಾಧ್ಯಮ ಸಂಯೋಜಕ ಶಾಂತನು ಭಾಯ್, ವಿಲಾಸಪುರದ ಬಿಕೆ ಮಂಜುಳಾ, ಹೈದರಾಬಾದಿನ ಸರಳಾ ಬಹೇನ್ ಇತರರು ಭಾಗವಹಿಸಲಿದ್ದಾರೆಂದರು.
ಮಾಧ್ಯಮದಿಂದ ಶಾಂತಿ, ಏಕತೆ ಮತ್ತು ವಿಶ್ವಾಸದ ಪ್ರಸರಣ ವಿಷಯ ಕುರಿತು ಮತ್ತು ಒತ್ತಡ ರಹಿತ ಕೆಲಸ ಮಾಡುವ ಬಗೆ ಬಗ್ಗೆಯೂ ಕಾರ್ಯಾಗಾರದಲ್ಲಿ ತಿಳಿಸಲಾಗುತ್ತದೆ. ನಗರ ಸೇರಿದಂತೆಯೇ ಜಿಲ್ಲೆಯ ಮಾಧ್ಯಮ ವಕ್ತಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ನಗರದ ಮಾಧ್ಯಮದವರಿಗೆ ಹೋಗಿಬರಲು ವಾಹನದ ವ್ಯವಸ್ಥೆ ಮಾಡಲಾಗುವುದು ಮತ್ತು ಅಲ್ಲಿ ಊಟದ ವ್ಯವಸ್ಥೆ ಇರುತ್ತದೆ ಎಂದು ಅವರು ಹೇಳಿದರು.