ಯಾದಗಿರಿ: ಹೆಸರು ಬೆಳೆಗೆ ಹಳದಿ ನಂಜಾಣು ರೋಗದ ಭಾದೆ; ರೈತರು ನಿರ್ವಾಹಣಾ ಕ್ರಮಕ್ಕೆ ಮುಂದಾಗಲು ಕೃಷಿ ಅಧಿಕಾರಿ ಸೂಚನೆ
ಯಾದಗಿರಿ: ಹೆಸರು ಬೆಳೆಗಳಿಗೆ ಅಲ್ಲಲ್ಲಿ ಹಳದಿ ನಂಜಾಣು ರೋಗದ ಭಾದೆ ಕಾಣಿಸಿಕೊಂಡಿದ್ದು, ರೈತರು ಇದರ ತಡೆಗೆ ಕೃಷಿ ಇಲಾಖೆ ಸೂಚಿಸಿದ ನಿರ್ವಹಣಾ ಕ್ರಮಗಳನ್ನು ಪಾಲಿಸಬೇಕೆಂದು ಸಹಾಯಕ ಕೃಷಿ ನಿರ್ದೇಶಕ ಸುರೇಶ ಬಿ. ಹೇಳಿದ್ದಾರೆ.
2025-26 ನೇ ಸಾಲಿನಲ್ಲಿ ಯಾದಗಿರಿ ಮತ್ತು ಗುರುಮಿಠಕಲ್ ತಾಲ್ಲೂಕಿನಲ್ಲಿ ಒಟ್ಟಾರೆಯಾಗಿ 9674 ಹೆಕ್ಟರ್ ಪ್ರದೇಶದಲ್ಲಿ ಹೆಸರಿನ ಬೆಳೆಯ ಬಿತ್ತನೆಯಾಗಿರುತ್ತದೆ. ಬಿತ್ತನೆಯಾಗಿ ಈಗಾಗಲೇ 20 ರಿಂದ 25 ದಿನದ ಬೆಳೆಯಿದ್ದು,ಈಗ ಅಲ್ಲಲ್ಲಿ ಹಳದಿ ನಂಜಾಣು ರೋಗದ ಭಾದೆ ಕಂಡುಬರುತ್ತಿದೆ. ರೋಗಗ್ರಸ್ಥ ಗಿಡಗಳನ್ನು ಕಿತ್ತಿ ಹೊಲದಿಂದ ದೂರ ಎಸೆಯಬೇಕು, ನಂಜಾಣು ರೋಗವು ಬಿಳಿ ನೋಣ ಎಂಬ ಕೀಟದಿಂದ ಹರಡುವುದರಿಂದ ಕೀಟ ನಿರ್ವಹಣಾ ಕ್ರಮಗಳನ್ನು ಹಮ್ಮಿಕೊಳ್ಳಬೇಕು ಮತ್ತು ಬೇವಿನ ಎಣ್ಣೆ 2 ಮೀ.ಲೀಟರ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕೆಂದು ಅವರು ತಿಳಿಸಿದ್ದಾರೆ.
ಇಮಿಡಾಕ್ಲೋಪ್ರೀಡ್ ಕೀಟನಾಶಕ 5 ಮೀ.ಲೀಟರ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು ಅಥವಾ ಫಿಮಿತ್ರೋಜನ್ 0.5 ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಲು ಅವರು ಕೋರಿದ್ದಾರೆ.