ಕೋವಿಡ್ ಸೋಂಕಿನಿಂದ 11 ಮಂದಿ ಮೃತ್ಯು; 100 ರ ಗಡಿ ದಾಟಿದ ಸಾವಿನ ಸಂಖ್ಯೆ
ಹೊಸದಿಲ್ಲಿ: ದೇಶಾದ್ಯಂತ ಕೋವಿಡ್-19 ಸೋಂಕಿನಿಂದ ಸೋಮವಾರ 11 ಮಂದಿ ಮೃತಪಟ್ಟಿದ್ದು, ಪ್ರಸಕ್ತ ವರ್ಷ ಒಂದೇ ದಿನ ದಾಖಲಾದ ಗರಿಷ್ಠ ಸಾವಿನ ಸಂಖ್ಯೆ ಇದಾಗಿದೆ. ಇದರ ಜತೆಗೆ ಈ ಬಾರಿ ದೇಶದಲ್ಲಿ ಸೋಂಕಿಗೆ ಬಲಿಯಾದರ ಒಟ್ಟು ಸಂಖ್ಯೆ 100ರ ಗಡಿ ದಾಟಿದೆ. ಪ್ರಸಕ್ತ ಕೋವಿಡ್ -19 ಅಲೆಯಲ್ಲಿ 108 ಮಂದಿ ಜೀವ ಕಳೆದುಕೊಂಡಂತಾಗಿದೆ.
ಕೇರಳದಲ್ಲಿ ಏಳು ಸಾವು ಸಂಭವಿಸಿದ್ದು, ದೆಹಲಿ, ಮಹಾರಾಷ್ಟ್ರ, ಛತ್ತೀಸ್ಗಢ ಮತ್ತು ಮಧ್ಯಪ್ರದೇಶದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಕಳೆದ ಕೆಲ ವಾರಗಳಿಂದ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವ ಕೇರಳದಲ್ಲಿ ಮೃತಪಟ್ಟ ಎಲ್ಲ ಏಳು ಮಂದಿ 60 ವರ್ಷ ಮೇಲ್ಪಟ್ಟವರು ಮತ್ತು ಇತರ ಅಸ್ವಸ್ಥತೆಗಳನ್ನು ಹೊಂದಿದ್ದರು ಎನ್ನಲಾಗಿದೆ. ಮೃತಪಟ್ಟವರಲ್ಲಿ ಬಹುತೇಕ ಎಲ್ಲರೂ ಪ್ಯಾಂಕ್ರಿಯಾಟೀಸ್, ಮೂತ್ರಕೋಶ ರೋಗ ಮತ್ತು ನ್ಯುಮೋನಿಯಾ ಹೊಂದಿದ್ದರು. ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 67 ವರ್ಷ ವಯಸ್ಸಿನ ವ್ಯಕ್ತಿ ದೆಹಲಿಯಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ.
ಕೋವಿಡ್‌ನಿಂದ ಮೃತಪಟ್ಟ ಬಹುತೇಕ ಎಲ್ಲರೂ ಸಹ ಅಸ್ವಸ್ಥತೆಗಳಾದ ಕ್ಯಾನ್ಸರ್, ಕಿಡ್ನಿ ವೈಫಲ್ಯ ಮತ್ತು ಹೃದ್ರೋಗದಿಂದ ಬಳಲುತ್ತಿದ್ದರು ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ದೇಶದಾದ್ಯಂತ ಕೇರಳದಲ್ಲಿ ಅತಿಹೆಚ್ಚು (1920) ಸಕ್ರಿಯ ಪ್ರಕರಣಗಳಿದ್ದು, ಗುಜರಾತ್ (1433), ದೆಹಲಿ (649) ಮತ್ತು ಮಹಾರಾಷ್ಟ್ರ (540) ನಂತರದ ಸ್ಥಾನಗಳಲ್ಲಿವೆ. ಉತ್ತರ ಪ್ರದೇಶ, ರಾಜಸ್ಥಾನ ಹಾಗೂ ಹರ್ಯಾಣದಲ್ಲೂ ಕೆಲ ಕೋವಿಡ್ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ವರದಿಯಾಗುತ್ತಿವೆ.