Bihar ಸಿಎಂ ನಿತೀಶ್ ಕುಮಾರ್ ಪುತ್ರ ನಿಶಾಂತ್ ನಾಳೆ ಜೆಡಿಯುಗೆ ಸೇರ್ಪಡೆ
ನಿತೀಶ್ ಕುಮಾರ್ , ನಿಶಾಂತ್ ಕುಮಾರ್ | Photo Credit : PTI
ಪಾಟ್ನಾ, ಮಾ.7: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಅವರು ಶನಿವಾರ ಇಲ್ಲಿ ಪಕ್ಷದ ಹಿರಿಯ ನಾಯಕರು ಮತ್ತು ಯುವ ಶಾಸಕರೊಂದಿಗೆ ಚರ್ಚೆಗಳನ್ನು ನಡೆಸಿದರು. ನಿಶಾಂತ್ ನೂತನ ಸಂಪುಟದಲ್ಲಿ ರಾಜ್ಯದ ಮುಂದಿನ ಉಪಮುಖ್ಯಮಂತ್ರಿಯಾಗಲಿದ್ದಾರೆ ಎನ್ನಲಾಗಿದೆ.
ಇತ್ತೀಚಿನ ಕೆಲವು ತಿಂಗಳುಗಳ ಹಿಂದಿನವರೆಗೂ ರಾಜಕೀಯಕ್ಕೆ ಸೇರುವುದರಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರದಿದ್ದ ನಿಶಾಂತ್, ತಾನು ರಾಜ್ಯ ರಾಜಕೀಯ ರಂಗವನ್ನು ಪ್ರವೇಶಿಸಲು ಸಿದ್ಧ ಎಂಬ ಸಾಕಷ್ಟು ಸುಳಿವುಗಳನ್ನು ನೀಡಿದ್ದಾರೆ. ಆರ್‌ಜೆಡಿಯ ತೇಜಸ್ವಿ ಪ್ರಸಾದ್ ಯಾದವ್, ಎಲ್‌ಜೆಪಿ (ರಾಮ್ ವಿಲಾಸ್) ಯ ಚಿರಾಗ್ ಪಾಸ್ವಾನ್ ಮತ್ತು ಜನ ಸುರಾಜ್ ಪಾರ್ಟಿಯ ಪ್ರಶಾಂತ್ ಕಿಶೋರ್ ಅವರು ಈಗಾಗಲೇ ರಾಜ್ಯ ರಾಜಕೀಯದಲ್ಲಿ ಸಕ್ರಿಯರಾಗಿರುವಾಗ, ನಿಶಾಂತ್ ತನಗಾಗಿ ಸ್ಥಾನವನ್ನು ರೂಪಿಸಿಕೊಳ್ಳಬೇಕಿದೆ.
ಇಲ್ಲಿ ಜೆಡಿಯು ಕಾರ್ಯಾಧ್ಯಕ್ಷ ಸಂಜಯ್ ಕುಮಾರ್ ಝಾ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ನಾಯಕರು ನಿಶಾಂತ್ ಗೆ ಪಕ್ಷದಲ್ಲಿ ಪ್ರಮುಖ ಜವಾಬ್ದಾರಿಯನ್ನು ವಹಿಸಲಾಗುವುದು ಎಂದು ತಿಳಿಸಿದರು. ಈ ನಡುವೆ ರಾಜ್ಯ ಜೆಡಿಯು ಕಚೇರಿಯ ಹೊರಗೆ ನಿಶಾಂತ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿ ಪೋಸ್ಟರ್‌ಗಳು ಕಾಣಿಸಿಕೊಂಡಿವೆ.
ನಿಶಾಂತ್ ಮಾ.8ರಂದು ಜೆಡಿಯುಗೆ ಸೇರ್ಪಡೆಗೊಳ್ಳುವ ಮೂಲಕ ವಿಧ್ಯುಕ್ತವಾಗಿ ರಾಜಕೀಯ ಪ್ರವೇಶಿಸಲಿದ್ದಾರೆ. ಸಾಫ್ಟ್‌ವೇರ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ ಅವರು ಯಾವಾಗಲೂ ಹೆಚ್ಚು ಪ್ರಚಾರ ಬಯಸಿದವರಲ್ಲ; ಆಧ್ಯಾತ್ಮಿಕತೆಯಲ್ಲಿ ಹೆಚ್ಚಿನ ಒಲವು ಹೊಂದಿದ್ದಾರೆ.
ಜೆಡಿಯುಗೆ ನಿಶಾಂತ್ ಅವರ ಪ್ರಸ್ತಾವಿತ ಪ್ರವೇಶವು ವಂಶಪಾರಂಪರ್ಯ ರಾಜಕಾರಣದ ವಿರುದ್ಧ ನಿತೀಶ ಅವರ ಆಕ್ರೋಶಕ್ಕೆ ವ್ಯತಿರಿಕ್ತವಾಗಿದೆ. ಗುರುವಾರ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೂಲಕ ನಿತೀಶ್ ಸಕ್ರಿಯ ರಾಜಕಾರಣಕ್ಕೆ ಪುತ್ರನ ಪ್ರವೇಶವನ್ನು ಸುಗಮಗೊಳಿಸಿದ್ದಾರೆ. ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ನಿಶಾಂತ್ ರಾಜ್ಯಾದ್ಯಂತ ರಾಜಕೀಯ ಪ್ರವಾಸ ಕೈಗೊಳ್ಳಲಿದ್ದಾರೆ.